ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಸ್ತ ಪಾಳಯಕ್ಕೆ ದೆಹಲಿಯಲ್ಲಿ ಹೊಸ ಸಂಕಷ್ಟ ಎದುರಾಗಿದೆ. ದಶಕಗಳ ಕಾಲ ಕಾಂಗ್ರೆಸ್ನ ಶಕ್ತಿ ಕೇಂದ್ರವಾಗಿದ್ದ ಅಕ್ಬರ್ ರಸ್ತೆಯ ಪ್ರಧಾನ ಕಚೇರಿಯನ್ನು ಖಾಲಿ ಮಾಡುವಂತೆ ಕೇಂದ್ರ ಸರ್ಕಾರ ಗಡುವು ನೀಡಿದೆ.
ಸುಮಾರು 48 ವರ್ಷಗಳಿಂದ ಕಾಂಗ್ರೆಸ್ನ ಎಲ್ಲಾ ರಾಜಕೀಯ ತಂತ್ರಗಳ ಕೇಂದ್ರಬಿಂದುವಾಗಿದ್ದ ಈ ಹಳೆಯ ಕಚೇರಿಯನ್ನು ಮಾರ್ಚ್ 28ರೊಳಗೆ ಬಿಟ್ಟುಕೊಡಬೇಕು ಎಂದು ಎಸ್ಟೇಟ್ ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಕೇವಲ ಪ್ರಧಾನ ಕಚೇರಿ ಮಾತ್ರವಲ್ಲ, 5, ರೈಸಿನಾ ರಸ್ತೆಯಲ್ಲಿರುವ ಯುವ ಕಾಂಗ್ರೆಸ್ ಕಚೇರಿಗೂ ‘ಖಾಲಿ ಮಾಡಿ’ ಎಂಬ ನೋಟಿಸ್ ಅಂಟಿಸಲಾಗಿದೆ.
ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಈ ಕ್ರಮವನ್ನು “ರಾಜಕೀಯ ಪ್ರೇರಿತ ಮತ್ತು ಕಾನೂನುಬಾಹಿರ” ಎಂದು ಕಿಡಿಕಾರಿದ್ದಾರೆ. ಕಚೇರಿ ಖಾಲಿ ಮಾಡಿಸುವುದಕ್ಕಿಂತ ದೇಶದ ಜನರಿಗೆ ಎಲ್ಪಿಜಿ, ಅಕ್ಕಿ, ಮಸಾಲ ಪದಾರ್ಥಗಳ ಬೆಲೆ ಏರಿಕೆ ತಡೆಯುವುದು ಸರ್ಕಾರದ ಆದ್ಯತೆಯಾಗಲಿ ಎಂದು ಪವನ್ ಖೇರಾ ವ್ಯಂಗ್ಯವಾಡಿದ್ದಾರೆ.
ಈಗಾಗಲೇ ಐಟಿಒ ಬಳಿಯ ‘ಇಂದಿರಾ ಭವನ’ಕ್ಕೆ ಪಕ್ಷ ಸ್ಥಳಾಂತರಗೊಂಡಿದ್ದರೂ, ಭಾವನಾತ್ಮಕವಾಗಿ ಅಕ್ಬರ್ ರಸ್ತೆಯ ಕಚೇರಿಯೇ ಇಷ್ಟು ದಿನ ಪ್ರಮುಖ ನಿರ್ಧಾರಗಳ ಅಡ್ಡೆಯಾಗಿತ್ತು.



