Friday, November 14, 2025

ಅಗಲಿದರೂ ಚಿರಸ್ಥಾಯಿ: ತಿಮ್ಮಕ್ಕನ ಪರಿಸರ ಪ್ರೇಮಕ್ಕೆ ಸಿಎಂ ಸಿದ್ದರಾಮಯ್ಯ ಶ್ಲಾಘನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪದ್ಮಶ್ರೀ ಪುರಸ್ಕೃತೆ ಮತ್ತು ವಿಶ್ವಖ್ಯಾತ ಪರಿಸರವಾದಿ ಸಾಲುಮರದ ತಿಮ್ಮಕ್ಕ (114) ಅವರು ಇಂದು ಮಧ್ಯಾಹ್ನ ಬೆಂಗಳೂರಿನ ಜಯನಗರ ಅಪೋಲೋ ಆಸ್ಪತ್ರೆಯಲ್ಲಿ ಬಹುಅಂಗಾಂಗ ವೈಫಲ್ಯದಿಂದ ನಿಧನರಾಗಿದ್ದಾರೆ.

ತಿಮ್ಮಕ್ಕನವರ ಪಾರ್ಥಿವ ಶರೀರದ ದರ್ಶನ ಪಡೆದು ಅಂತಿಮ ನಮನ ಸಲ್ಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಮಾಧ್ಯಮದವರೊಂದಿಗೆ ಮಾತನಾಡಿ ವೃಕ್ಷಮಾತೆಯ ಪರಿಸರ ಪ್ರೇಮವನ್ನು ಸ್ಮರಿಸಿದರು.

ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ:

ಮುಖ್ಯಮಂತ್ರಿಗಳು, “ಸಾಲುಮರದ ತಿಮ್ಮಕ್ಕನವರು ಅಗಲಿದರೂ, ಅವರ ಪರಿಸರ ಪ್ರೇಮ ಮತ್ತು ಸೇವೆ ಚಿರಸ್ಥಾಯಿಯಾಗಿ ಉಳಿಯಲಿದೆ. ಅವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಗುವುದು” ಎಂದು ಘೋಷಿಸಿದರು. ಸದ್ಯ ಕುಟುಂಬಸ್ಥರು ಎರಡು-ಮೂರು ಸ್ಥಳಗಳನ್ನು ಸೂಚಿಸಿದ್ದು, ಅಂತ್ಯಕ್ರಿಯೆ ಎಲ್ಲಿ ನಡೆಸಬೇಕು ಎಂಬುದನ್ನು ಶೀಘ್ರದಲ್ಲಿಯೇ ನಿರ್ಧರಿಸಲಾಗುವುದು ಎಂದು ತಿಳಿಸಿದರು.

ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನಲ್ಲಿ ಜನಿಸಿದ್ದ ತಿಮ್ಮಕ್ಕನವರು ತಮ್ಮ 114 ವರ್ಷಗಳ ಜೀವನದಲ್ಲಿ ಮರಗಿಡಗಳನ್ನೇ ತಮ್ಮ ಮಕ್ಕಳಂತೆ ಸಾಕಿದರು. ಅವರು ನೆಟ್ಟ ಮರಗಳು ಇಂದು ಹೆಮ್ಮರವಾಗಿ ಬೆಳೆದು ನಿಂತು ಜನರಿಗೆ ನೆರಳು ನೀಡುತ್ತಿವೆ. ಅವರ ಈ ಮಹೋನ್ನತ ಸೇವೆಯನ್ನು ಪರಿಗಣಿಸಿ ಕೇಂದ್ರ ಸರ್ಕಾರವು ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು ಎಂದು ಸಿಎಂ ಸ್ಮರಿಸಿದರು.

ಬೇಲೂರಿನಲ್ಲಿ ವಸ್ತು ಸಂಗ್ರಹಾಲಯದ ಬೇಡಿಕೆ:

ತಿಮ್ಮಕ್ಕನವರು ಕೊನೆಯ ಆಸೆಯ ಪತ್ರ ನೀಡಿದ್ದು, ಅದರಲ್ಲಿ ಬೇಲೂರಿನಲ್ಲಿ ತಮ್ಮ ನೆನಪಿಗಾಗಿ ಒಂದು ವಸ್ತು ಸಂಗ್ರಹಾಲಯ ಮಾಡಬೇಕು ಎಂದು ಕೋರಿದ್ದಾರೆ. ಈ ಬಗ್ಗೆ ಸರ್ಕಾರ ಸೂಕ್ತವಾಗಿ ಪರಿಶೀಲಿಸಲಿದೆ ಎಂದು ಸಿಎಂ ಭರವಸೆ ನೀಡಿದರು. ತಿಮ್ಮಕ್ಕನವರ ಆತ್ಮಕ್ಕೆ ಶಾಂತಿ ದೊರೆಯಲಿ ಎಂದು ಪ್ರಾರ್ಥಿಸಿ, ಕುಟುಂಬ ಮತ್ತು ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಸಿಎಂ ಸಂತಾಪ ಸೂಚಿಸಿದರು.

error: Content is protected !!