ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಉಪರಾಷ್ಟ್ರಪತಿ ಚುನಾವಣೆಗೆ ಸಜ್ಜಾಗಲು ಎನ್ಡಿಎ ಸಂಸದರಿಗೆ ಕಾರ್ಯಾಗಾರ ನಡೆಸಲಾಗಿದ್ದು, ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಕೂಡ ಸಾಮಾನ್ಯ ಸಂಸದರಂತೆ ಭಾಗವಹಿಸಿದ್ದಾರೆ.
ಸಂಸತ್ ಸಂಕೀರ್ಣದ ಜಿಎಂಸಿ ಬಾಲಯೋಗಿ ಸಭಾಂಗಣದಲ್ಲಿ ನಡೆದ ಕಾರ್ಯಾಗಾರದಲ್ಲಿ ಸಾಮಾನ್ಯ ಬಿಜೆಪಿ ಸಂಸದರಂತೆ ಪ್ರಧಾನಿ ಮೋದಿ ಕೊನೆಯ ಸಾಲಿನಲ್ಲಿ ಕುಳಿತಿದ್ದರು.
ಈ ದೃಶ್ಯದ ಫೋಟೋವೊಂದನ್ನು ಬಿಜೆಪಿ ಸಂಸದ ರವಿ ಕಿಶನ್ ಅವರು ಎಕ್ಸ್ ಪೋಸ್ಟ್ನಲ್ಲಿ ಹಂಚಿಕೊಂಡಿದ್ದಾರೆ. ಬಿಜೆಪಿಯ ಶಕ್ತಿಗೆ ಇದು ದ್ಯೋತಕವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
‘ಎನ್ಡಿಎ ಸಂಸದರ ಕಾರ್ಯಾಗಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಕೊನೆಯ ಸಾಲಿನಲ್ಲಿ ಕುಳಿತಿದ್ದರು. ಅವರು ಬಿಜೆಪಿಯ ಶಕ್ತಿಯ ದ್ಯೋತಕವಾಗಿದ್ದಾರೆ. ಈ ಸಂಘಟನೆಯಲ್ಲಿ ಪ್ರತಿಯೊಬ್ಬ ಕಾರ್ಯಕರ್ತನೂ ಒಂದು ಭಾಗವಾಗಿದ್ದಾರೆ’ ಎಂದು ರವಿ ಕಿಶನ್ ತಿಳಿಸಿದ್ದಾರೆ.
ಸೆಪ್ಟೆಂಬರ್ 9ರಂದು ಉಪರಾಷ್ಟ್ರಪತಿಗಳ ಆಯ್ಕೆಗೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಎನ್ಡಿಎ ಸಂಸದರಿಗೆ ಈ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.
ಎನ್ಡಿಎ ಅಭ್ಯರ್ಥಿಯಾಗಿ ಮಹಾರಾಷ್ಟ್ರ ರಾಜ್ಯಪಾಲ ಸಿ.ಪಿ. ರಾಧಾಕೃಷ್ಣನ್ ಅವರು ಸ್ಪರ್ಧಿಸಿದ್ದಾರೆ. ವಿಪಕ್ಷಗಳು ಸೇರಿ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಬಿ. ಸುದರ್ಶನ್ ರೆಡ್ಡಿ ಅವರನ್ನು ಕಣಕ್ಕಿಳಿಸಿವೆ.
https://x.com/ravikishann/status/1964597974044201265
ಪಕ್ಷಗಳ ಬಲಾಬಲ ಪರಿಗಣಿಸಿದರೆ ಎನ್ಡಿಎ ಅಭ್ಯರ್ಥಿ ರಾಧಾಕೃಷ್ಣವ್ ಅವರಿಗೆ 439 ಸಂಸದರ ಬೆಂಬಲ ಇದೆ. ವಿಪಕ್ಷಗಳ ಅಭ್ಯರ್ಥಿಗೆ ಕೇವಲ 324 ಸದಸ್ಯರ ಬೆಂಬಲ ಇದೆ. ಬಿಜೆಡಿ, ಬಿಆರ್ಎಸ್ ಪಕ್ಷಗಳ ಸಂಸದರ ಬೆಂಬಲ ಯಾರಿಗೆ ಇದೆ ಎನ್ನುವ ಸುಳಿವು ಇನ್ನೂ ಸಿಕ್ಕಿಲ್ಲ. ಆದಾಗ್ಯೂ ರಾಧಾಕೃಷ್ಣನ್ ಅವರು ಮುಂದಿನ ಉಪರಾಷ್ಟ್ರಪತಿಯಾಗುವ ಎಲ್ಲಾ ಸಾಧ್ಯತೆ ದಟ್ಟವಾಗಿದೆ.