ಹೊಸದಿಗಂತ ಡಿಜಿಟಲ್ ಡೆಸ್ಕ್:
ಕ್ಯಾಪ್ಟನ್ ಜೊತೆಗಿನ ಭೀಕರ ಕಾಳಗದಲ್ಲಿ ತನ್ನ ಒಂದು ದಂತವನ್ನು ಕಳೆದುಕೊಂಡು ಸ್ವಲ್ಪ ದಿನಗಳ ಕಾಲ ಮಂಕಾಗಿದ್ದ ಒಂಟಿ ಸಲಗ ‘ಭೀಮ’, ಇದೀಗ ಸಂಪೂರ್ಣ ಚೇತರಿಸಿಕೊಂಡು ಮತ್ತೆ ಪೂರ್ಣ ಪ್ರಮಾಣದಲ್ಲಿ ಸಕ್ರಿಯವಾಗಿದೆ.
ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ವಾಟೇಹಳ್ಳಿ ಗ್ರಾಮದ ಬಳಿ ಭೀಮ ಮತ್ತೆ ಕಾಣಿಸಿಕೊಂಡಿದ್ದು, ಅದರ ಚಲನವಲನಗಳು ಹೆಚ್ಚಾಗಿವೆ. ಕಾಳಗದ ನಂತರ ಸ್ವಲ್ಪ ದಿನ ಕಾಡಿನ ಆಳದಲ್ಲಿದ್ದ ಈ ದೈತ್ಯ ಸಲಗವು, ಈಗ ಪುನಃ ಗ್ರಾಮ ಪ್ರದೇಶಗಳಿಗೆ ಪ್ರವೇಶ ನೀಡುತ್ತಿದೆ. ಇತ್ತೀಚೆಗೆ, ಗ್ರಾಮದ ಕಾಫಿ ತೋಟವೊಂದರ ಬಳಿ ಅಳವಡಿಸಿದ್ದ ಸೌರ ವಿದ್ಯುತ್ ಬೇಲಿಯಿಂದ ಶಾಕ್ ಹೊಡೆಯದಂತೆ ಎಚ್ಚರ ವಹಿಸಿ, ಮರವೊಂದನ್ನು ಬೇಲಿಯ ಮೇಲೆ ಬೀಳಿಸಿ ಅದನ್ನು ದಾಟಿ ಹೋಗಿರುವ ಆಶ್ಚರ್ಯಕರ ಘಟನೆ ವರದಿಯಾಗಿದೆ.
ಗ್ರಾಮ ಹಾಗೂ ಜನನಿಬಿಡ ಪ್ರದೇಶಗಳಲ್ಲಿ ಭೀಮನ ಓಡಾಟ ಹೆಚ್ಚಾಗಿದ್ದು, ಅದರ ದೃಶ್ಯಗಳನ್ನು ಸೆರೆಹಿಡಿಯಲು ಸ್ಥಳೀಯ ಯುವಕರು ಮುಗಿಬೀಳುತ್ತಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಭೀಮನ ಚಲನವಲನಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಇಟಿಎಫ್ ಸಿಬ್ಬಂದಿಯು, ಗ್ರಾಮಸ್ಥರಿಗೆ ಎಚ್ಚರಿಕೆ ಹಾಗೂ ಅಗತ್ಯ ಮಾಹಿತಿಯನ್ನು ನೀಡುತ್ತಿದ್ದಾರೆ.
ನವೆಂಬರ್ 9 ರಂದು ಜಗಬೋರನಹಳ್ಳಿ ಗ್ರಾಮದ ಬಳಿ ಭೀಮ ಮತ್ತು ಕ್ಯಾಪ್ಟನ್ ನಡುವೆ ಭೀಕರ ಕಾಳಗ ನಡೆದಿತ್ತು. ಈ ಕಾಳಗದ ಸಂದರ್ಭದಲ್ಲಿ ಭೀಮನು ಸಿಟ್ಟಿನಿಂದ ಬೃಹತ್ ಮರಕ್ಕೆ ಗುದ್ದಿದ್ದರಿಂದ ಒಂದು ದಂತ ಮುರಿದು ಬಿದ್ದಿತ್ತು. ದಂತ ಕಳೆದುಕೊಂಡ ನೋವಿನಲ್ಲಿ ಒಂಟಿಸಲಗವು ಘೀಳಿಡುತ್ತಾ ನರಳಾಡಿತ್ತು. ಆದರೆ, ಈಗ ಅದರ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆಯಾಗಿದ್ದು, ಹಳೆಯ ಆಕ್ರಮಣಕಾರಿ ಶೈಲಿಯಲ್ಲಿ ಭೀಮ ಮತ್ತೆ ಸಕ್ರಿಯವಾಗಿದೆ.

