February 22, 2026
Sunday, February 22, 2026
spot_img

ರಾಷ್ಟ್ರ ನಿರ್ಮಾಣಕ್ಕಾಗಿ ಎಲ್ಲರೂ ಒಗ್ಗೂಡಬೇಕು: ಶ್ರೀ ಬ್ರಹ್ಮನಿಷ್ಟಾನಂದ ಸ್ವಾಮೀಜಿ

ಹೊಸದಿಗಂತ ವರದಿ ಚಿತ್ರದುರ್ಗ:

ಇಂದಿನ ಯುವ ಜನತೆ ಎತ್ತ ಸಾಗುತ್ತಿದೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಬೇಕಾದ ಅಗತ್ಯವಿದೆ. ಅವರನ್ನು ಸರಿ ದಾರಿಗೆ ತರುವ ಮೂಲಕ ಸದೃಢ ಭಾರತ ನಿರ್ಮಾಣಕ್ಕೆ ಅಣಿಗೊಳಿಸಬೇಕಾಗಿದೆ ಎಂದು ಶ್ರೀ ಶಾರದಾ ರಾಮಕೃಷ್ಣ ಆಶ್ರಮದ ಶ್ರೀ ಬ್ರಹ್ಮನಿಷ್ಟಾನಂದ ಸ್ವಾಮೀಜಿ ಹೇಳಿದರು.

ಹಿಂದೂ ಸಂಗಮ ಆಯೋಜನಾ ಸಮಿತ ವತಿಯಿಂದ ನಗರದ ಜೋಗಿಮಟ್ಟಿ ರಸ್ತೆಯಲ್ಲಿನ ಮೈದಾನದಲ್ಲಿ ಆಯೋಜಿಸಿದ್ದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾರತ ಮಾತೆಯ ಮಡಿಲಿನಲ್ಲಿರುವ ನಾವು ಎಲ್ಲೋ ಒಂದು ಕಡೆ ಎಡವಿದ್ದೇವೆ ಎಂಬ ಆತಂಕವಿದೆ. ನಾವೆಲ್ಲಾ ಹಿಂದು ಎಂಬ ಮನೋಭಾವನೆಯಿಂದ ಒಟ್ಟಾಗಿ ಬಾಳಬೇಕು. ಹಿಂದು ಸಮಾಜ ಸಂರಕ್ಷಣೆಗಾಗಿ ಪ್ರತಿಯೊಬ್ಬ ಹಿಂದೂಗಳು ಕಂಕಣಬದ್ಧರಾಗಬೇಕು ಎಂದರು.

ಭಾರತ ಮಾತೆಯ ಮಕ್ಕಳಾಗಿ ದೇಶ ರಕ್ಷಣೆ ಮಾಡುವುದು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯ. ಯಾವತ್ತೂ ಕೂಡ ಭಾರತೀಯ ಸಂಸ್ಕೃತಿ, ಸಂಸ್ಕಾರ ಮರೆಯುವಂತಿಲ್ಲ ಮುಂದಿನ ಮಕ್ಕಳಿಗೆ ಸಂಸ್ಕಾರ ಕಲಿಸಬೇಕಾಗಿದೆ. ಹಿಂದೂ ಸಂಗಮದ ಮೂಲಕ ರಾಷ್ಟ್ರ ನಿರ್ಮಾಣಕ್ಕಾಗಿ ಎಲ್ಲರೂ ಒಗ್ಗೂಡಬೇಕಾಗಿದೆ. ಪಾಂಚಜನ್ಯವನ್ನು ಮತ್ತೆ ಮೊಳಗಿಸಬೇಕಾದ ಅಗತ್ಯವಿದೆ ಸ್ವದೇಶಿ ವಸ್ತುಗಳ ಬಳಕೆ, ನಾಗರೀಕ ಜವಾಬ್ದಾರಿ ಅರಿತು ಬಾಳುವಂತಾಗಬೇಕು ಎಂದು ಹೇಳಿದರು.

ಎಬಿವಿಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾದ ಪ್ರವೀಣ್ ದಿಕ್ಕೂಚಿ ಭಾಷಣ ಮಾಡಿ, ಹಿಂದೂ ಸಮಾಜವು ಸಂಘಟನೆ, ಸ್ವಾಭಿಮಾನ, ಸಮಾನತೆ, ಸಂಖ್ಯೆ ಹೆಚ್ಚಳ, ಸ್ವದೇಶಿ ಜೀವನ ಪದ್ಧತಿ ಆಚರಿಸಬೇಕು. ಹಿಂದೂ ಎಂಬುದು ಪಂಥವಲ್ಲ. ಶಾಶ್ವತ ಸತ್ಯಗಳನ್ನು ಅಳವಡಿಸಿಕೊಂಡ ಧರ್ಮ. ಇದು ಸೂರ್ಯ, ಪ್ರಕೃತಿಯನ್ನು ಆರಾಧಿಸುವ ಧರ್ಮ. ಹಾಗಾಗಿ ಈ ಸನಾತನ ಧರ್ಮವನ್ನು ಯಾರಿಂದಲೂ ಅಳಿಸಲು ಸಾಧ್ಯವಿಲ್ಲ. ಸೂರ್ಯನಷ್ಟೇ ಇದು ಅಜರಾಮರ ಎಂದು ಹೇಳಿದರು.

ಹಿಂದೂ ಸಂಗಮ ದೇಶದ ಎಲ್ಲಾ ಪಂಚಾಯಿತಿ ಮಟ್ಟದಲ್ಲಿ ನಡೆಯುತ್ತದೆ. ಹಿಂದೂಗಳ ಏಳುಬೀಳುಗಳನ್ನು ನೆನಪು ಮಾಡಿಕೊಂಡರೆ ಭವಿಷ್ಯವನ್ನು ನಿರ್ಮಿಸಬಹುದು. ಭವಿಷ್ಯ ಉತ್ತಮವಾಗಿ ನಿರ್ಮಿಸಬೇಕಾದಲ್ಲಿ ಹಿಂದೂಗಳು ಇತಿಹಾಸವನ್ನು ಒಮ್ಮೆ ತಿರುಗಿ ನೋಡುವ ಅಗತ್ಯವಿದೆ. ಹಿಂದೂ ಸಂಸ್ಕೃತಿ ಪ್ರಪಂಚಕ್ಕೆ ಮಾದರಿಯಾಗಿದೆ. ಸನಾತನ ಧರ್ಮದಲ್ಲಿ ಸಮಾನತೆಗೆ ಬಹಳ ಮಹತ್ವ ನೀಡಲಾಗಿದೆ. ಇದನ್ನೂ ಎಲ್ಲರೂ ಪಾಲಿಸಿ ಧರ್ಮವನ್ನು ಗಟ್ಟಿಗೊಳಿಸಬೇಕಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಪೌರಕಾರ್ಮಿಕರು, ರೈತರು, ನಿವೃತ್ತ ಯೋಧರು, ಪೈಲ್ವಾನರು, ಪತ್ರಕರ್ತರು, ಹಾಗೂ ವೈದ್ಯರು, ಕಲಾ ಸೇವಕರಿಗೆ ಸೇರಿದಂತೆ ಅನೇಕ ಸಾಧಕರನ್ನು ಸನ್ಮಾನಿಸಲಾಯಿತು. ನಂದಿನಿ ಶಿವಪ್ರಕಾಶ್ ತಂಡದವರು ಭರತನ್ಯಾಟ ಪ್ರದರ್ಶನ ಮಾಡಿದರು. ಕೃಷ್ಣಮೂರ್ತಿ ಸ್ವಾಗತಿಸಿದರು. ಶೋಭಾ ಅವರು ಹನುಮಾನ್ ಚಾಲಿಸ್ ಪಠಣ ಮಾಡಿದರು. ಜಾಹ್ನವಿ ಓಂಕಾರ್ ವೈಯಕ್ತಿಕ ಗೀತೆ ಹಾಡಿದರು. ರಶ್ಮಿ ಪ್ರಸ್ತಾವಿಕವಾಗಿ ಮಾತನಾಡಿದರು. ಛಲವಾದಿ ತಿಪ್ಪೇಸ್ವಾಮಿ ವಂದಿಸಿದರು.

ಈ ಸಂದರ್ಭದಲ್ಲಿ ಜಿತೇಂದ್ರ ಹುಲಿಕುಂಟೆ, ಲೀಲಾಧರ್ ಠಾಕೂರ್, ರುದ್ರೇಶ್, ರಾಜೀವಲೋಚನ, ಓಂಕಾರ್, ಜಿ.ಎಂ.ಸುರೇಶ್, ಸಂಪತ್ ಕುಮಾರ್, ಲೋಕೇಶ್ ಸೇರಿದಂತೆ ಇತರರು ಭಾಗವಹಿಸಿದ್ದರು. ಇದಕ್ಕೂ ಮುನ್ನಾ ಶೋಭಾಯಾತ್ರೆ ನಡೆಸಲಾಯಿತು. ನಗರದ ರಂಗಯ್ಯನ ಬಾಗಿಲು ಬಳಿಯ ಮದಕರಿ ಗಣಪತಿ ದೇವಾಲಯದಿಂದ ಪ್ರಾರಂಭಿಸಿ ಜೋಗಿಮಟ್ಟಿ ರಸ್ತೆಯಲ್ಲಿನ 4ನೇ ಕ್ರಾಸ್‌ನ ಮೈದಾನದಲ್ಲಿ ಮುಕ್ತಾಯವಾಯಿತು. ಈ ಸಮಯದಲ್ಲಿ ಮಕ್ಕಳು ದೇಶ ಭಕ್ತಿ ಸಾರುವ ಮತ್ತು ಪುರಾಣ ಪುರುಷರ ವೇಷಭೂಷಣ ಹಾಕಿಕೊಂಡು ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !