Saturday, December 6, 2025

ಹಿಮಾಲಯದ ಗಡಿಯಲ್ಲಿ ರೋಚಕ ಕಾರ್ಯಾಚರಣೆ: ಏಷ್ಯಾದ ಮೋಸ್ಟ್ ವಾಂಟೆಡ್ ಲೇಡಿ ಸ್ಮಗ್ಲರ್‌ ಅಂದರ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ-ಚೀನಾ ಗಡಿಯ ಹಿಮಾವೃತ ಪ್ರದೇಶದಲ್ಲಿ ನಡೆದ ರಹಸ್ಯ ಕಾರ್ಯಾಚರಣೆ, ಅಂತಾರಾಷ್ಟ್ರೀಯ ವನ್ಯಜೀವಿ ಕಳ್ಳಸಾಗಣೆ ಜಾಲಕ್ಕೆ ದೊಡ್ಡ ಹೊಡೆತ ನೀಡಿದೆ. ಹಲವು ವರ್ಷಗಳಿಂದ ಕಾನೂನು ಕೈಗೆ ಸಿಗದೇ ತಲೆಮರೆಸಿಕೊಂಡಿದ್ದ ಯಾಂಗ್ಚೆನ್ ಲಾಚುಂಗ್ಪಾ ಎಂಬ ಮಹಿಳಾ ಸ್ಮಗ್ಲರ್‌ನ್ನು ಉತ್ತರ ಸಿಕ್ಕಿಂನ ಲಾಚುಂಗ್ ಪ್ರದೇಶದಲ್ಲಿ ಭದ್ರತಾ ಪಡೆಗಳು ಬಂಧಿಸಿವೆ.

ಮಧ್ಯಪ್ರದೇಶ ರಾಜ್ಯ ಹುಲಿ ದಾಳಿ ಪಡೆ ಹಾಗೂ ವನ್ಯಜೀವಿ ಅಪರಾಧ ನಿಯಂತ್ರಣ ಬ್ಯೂರೋ ಸಂಯುಕ್ತವಾಗಿ ಈ ಕಾರ್ಯಾಚರಣೆ ನಡೆಸಿದ್ದು, ಸಿಕ್ಕಿಂ ಪೊಲೀಸರು, ಅರಣ್ಯ ಇಲಾಖೆ ಮತ್ತು ಎಸ್‌ಎಸ್‌ಬಿ ಸಿಬ್ಬಂದಿ ಸಹಕಾರ ನೀಡಿದ್ದಾರೆ. ಸುಮಾರು ಹತ್ತು ವರ್ಷಗಳಿಂದ ವನ್ಯಜೀವಿ ಕಳ್ಳಸಾಗಣೆಯಲ್ಲಿ ಸಕ್ರಿಯವಾಗಿದ್ದ ಯಾಂಗ್ಚೆನ್ ವಿರುದ್ಧ ಹಲವು ರಾಷ್ಟ್ರಗಳಲ್ಲಿ ಪ್ರಕರಣಗಳಿದ್ದು, ಇತ್ತೀಚೆಗಷ್ಟೇ ಆಕೆಯ ವಿರುದ್ಧ ಇಂಟರ್‌ಪೋಲ್ ರೆಡ್ ನೋಟಿಸ್ ಜಾರಿಮಾಡಿತ್ತು.

ಗುಪ್ತಚರ ಮಾಹಿತಿ ಆಧಾರವಾಗಿ ರೂಪಿಸಲಾದ ಯೋಜನೆಯಂತೆ, ಅಧಿಕಾರಿಗಳು ಸಾಮಾನ್ಯ ವ್ಯಕ್ತಿಗಳ ಸೋಗಿನಲ್ಲಿ ಆಕೆಯನ್ನು ಸುತ್ತುವರಿದು ಬಂಧಿಸಿದರೆಂದು ಅಧಿಕಾರಿಗಳು ತಿಳಿಸಿದ್ದಾರೆ. ಬಂಧನದ ವೇಳೆ ಆಕೆಯಿಂದ ಎರಡು ಮೊಬೈಲ್‌ಗಳು ಹಾಗೂ ಕಳ್ಳಸಾಗಣೆ ಜಾಲಕ್ಕೆ ಸಂಬಂಧಿಸಿದ ಕೋಡೆಡ್ ದಾಖಲೆಗಳು ಸಿಕ್ಕಿವೆ. ಬಂಧನದ ಬಳಿಕ ಆಕೆಯನ್ನು ಗ್ಯಾಂಗ್ಟಾಕ್‌ಗೆ ಕರೆತಂದು ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ನಂತರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ನ್ಯಾಯಾಲಯ ಜಾಮೀನು ನಿರಾಕರಿಸಿ, ಮುಂದಿನ ವಿಚಾರಣೆಗೆ ಮಧ್ಯಪ್ರದೇಶಕ್ಕೆ ಕಳುಹಿಸುವಂತೆ ಆದೇಶಿಸಿದೆ.

error: Content is protected !!