ಸೌಂದರ್ಯ ಉತ್ಪನ್ನಗಳು ಪ್ರತಿದಿನದ ಜೀವನದ ಅವಿಭಾಜ್ಯ ಅಂಗವಾಗಿದ್ದರೂ, ಅವುಗಳ ಅವಧಿ ಮೀರಿದ ನಂತರ ಬಳಕೆ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಕೆಲವೊಮ್ಮೆ ಇಷ್ಟವಿದ್ದರೂ ಅಥವಾ ತಿಳಿಯದೆ, ಅವಧಿ ಮೀರಿದ ಮಸ್ಕರಾ, ಐಲೈನರ್ ಅಥವಾ ಕ್ರೀಮ್ ಬಳಸುವ ಪರಿಸ್ಥಿತಿ ಎದುರಾಗಬಹುದು. ಆದರೆ ಇವು ಚರ್ಮದ ತೊಂದರೆಗಳಿಂದ ಹಿಡಿದು ಗಂಭೀರ ಸೋಂಕುಗಳವರೆಗೆ ಕಾರಣವಾಗಬಹುದು. ಚರ್ಮವನ್ನು ಆರೋಗ್ಯಕರವಾಗಿಡಲು ಹಾಗೂ ಒಟ್ಟಾರೆ ಯೋಗಕ್ಷೇಮಕ್ಕಾಗಿ ಮೇಕಪ್ ಬ್ಯಾಗ್ ಪರಿಶೀಲನೆ ಮತ್ತು ನಿಯಮಿತ ಬದಲಾವಣೆ ಅತ್ಯಂತ ಅಗತ್ಯ.
ತಜ್ಞರ ಪ್ರಕಾರ, ಅವಧಿ ಮೀರಿದ ಮೇಕಪ್ ಉತ್ಪನ್ನಗಳ ರಾಸಾಯನಿಕ ಸಂಯೋಜನೆ ಬದಲಾಗುವುದರಿಂದ ಚರ್ಮದಲ್ಲಿ, ಕೆಂಪುದದ್ದುಗಳು, ತುರಿಕೆ ಮತ್ತು ಶುಷ್ಕತೆ ಉಂಟಾಗುತ್ತದೆ. ಕೆಲ ಸಂದರ್ಭಗಳಲ್ಲಿ ಇದು ಅಲರ್ಜಿಯ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಬಹುದು. ವಿಶೇಷವಾಗಿ ಕಣ್ಣಿನ ಉತ್ಪನ್ನಗಳಾದ ಮಸ್ಕರಾ ಮತ್ತು ಐಲೈನರ್‌ಗಳಲ್ಲಿ ಬ್ಯಾಕ್ಟೀರಿಯಾ ಬೆಳೆದು ಕಣ್ಣುಗಳ ಸೋಂಕುಗಳಿಗೆ ಕಾರಣವಾಗಬಹುದು. ಇದನ್ನು ನಿರ್ಲಕ್ಷಿಸಿದರೆ ಕಾಂಜಂಕ್ಟಿವಿಟಿಸ್‌ನಂತಹ ಗಂಭೀರ ಸಮಸ್ಯೆಗಳು ಎದುರಾಗಬಹುದು.
ಅದೇ ರೀತಿ, ಅವಧಿ ಮೀರಿದ ಉತ್ಪನ್ನಗಳನ್ನು ನಿರಂತರವಾಗಿ ಬಳಸುವುದರಿಂದ ಡರ್ಮಟೈಟಿಸ್, ಅಕಾಲಿಕ ವಯಸ್ಸಾದ ಲಕ್ಷಣಗಳು ಸೇರಿದಂತೆ ದೀರ್ಘಕಾಲದ ಸಮಸ್ಯೆಗಳು ಕಂಡುಬರುತ್ತವೆ. ಅಪರೂಪದ ಸಂದರ್ಭಗಳಲ್ಲಿ ಸೂಕ್ಷ್ಮಾಣುಜೀವಿಗಳು ಗಂಭೀರ ಆರೋಗ್ಯ ಸಮಸ್ಯೆಗೂ ಕಾರಣವಾಗಬಹುದು.