ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಬಿಎ (ಆನರ್ಸ್) ಸೋಷಿಯಲ್ ವರ್ಕ್‌ನ ಸೆಮಿಸ್ಟರ್ 1 ಪರೀಕ್ಷೆಯಲ್ಲಿ ಕೇಳಲಾದ ಪ್ರಶ್ನೆಯೊಂದು ವಿವಾದಕ್ಕೆ ಕಾರಣವಾದ ನಂತರ ಆಂತರಿಕ ತನಿಖೆಯನ್ನು ಆರಂಭಿಸಿದೆ.
ವಿಚಾರಣೆಯ ಫಲಿತಾಂಶ ಬರುವವರೆಗೆ, ಪರೀಕ್ಷಾ ಪತ್ರಿಕೆಯನ್ನು ಸಿದ್ಧಪಡಿಸಿದ ಪ್ರಾಧ್ಯಾಪಕರನ್ನು ಅಮಾನತುಗೊಳಿಸಲಾಗಿದೆ. ಸಮಿತಿಯು ತನ್ನ ವರದಿಯನ್ನು ಸಲ್ಲಿಸುವವರೆಗೆ ಅಮಾನತು ಜಾರಿಯಲ್ಲಿರುತ್ತದೆ ಎಂದು ವಿಶ್ವವಿದ್ಯಾಲಯ ತಿಳಿಸಿದೆ.
ಈ ವಾರದ ಆರಂಭದಲ್ಲಿ ನಡೆದ ಬಿಎ (ಆನರ್ಸ್) ಸಮಾಜಶಾಸ್ತ್ರದ ಮೊದಲ ಸೆಮಿಸ್ಟರ್ ಪರೀಕ್ಷೆಯಲ್ಲಿ ಭಾರತದಲ್ಲಿ ಸಾಮಾಜಿಕ ಸಮಸ್ಯೆಗಳು ಎಂಬ ಶೀರ್ಷಿಕೆಯ ಪ್ರಬಂಧದ ಮೇಲೆ ಕೇಳಲಾದ 15 ಅಂಕಗಳ ಪ್ರಶ್ನೆ ಸದ್ಯ ವಿವಾದ ಹುಟ್ಟು ಹಾಕಿದೆ. ಭಾರತದಲ್ಲಿ ಮುಸ್ಲಿಂ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯಗಳನ್ನು ಸೂಕ್ತ ಉದಾಹರಣೆಗಳೊಂದಿಗೆ ವಿವರಿಸಿ ಎಂಬ ಪ್ರಶ್ನೆ ನೀಡಲಾಯಿತು.
. ವೀರೇಂದ್ರ ಬಾಲಾಜಿ ಶಹಾರೆ ಈ ಪ್ರಶ್ನೆ ರಚಿಸಿದ್ದು ಅವರ ವಿರುದ್ದ ಸಾಕಷ್ಟು ಟೀಕೆ ವ್ಯಕ್ತವಾಗುತ್ತಿದೆ. ಅವರ ವಿರುದ್ಧ ಸಾಕಷ್ಟು ದೂರು ಬಂದ ನಂತರ, ವಿಶ್ವವಿದ್ಯಾನಿಲಯವು ತಾತ್ಕಾಲಿಕವಾಗಿ ಅಮಾನತುಗೊಳಿಸಿದೆ. ಜತೆಗೆ ತನಿಖಾ ಸಮಿತಿಯನ್ನು ರಚಿಸಲಾಗಿದೆ. ʼ’ಸಮಿತಿಯು ತನ್ನ ವರದಿಯನ್ನು ಸಲ್ಲಿಸುವವರೆಗೆ, ಸಂಬಂಧಪಟ್ಟ ಪ್ರಾಧ್ಯಾಪಕರನ್ನು ಅಮಾನತುಗೊಳಿಸಲಾಗಿದೆ’ ಎಂದು ವಿಶ್ವವಿದ್ಯಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತಾತ್ಕಾಲಿಕ ರಿಜಿಸ್ಟ್ರಾರ್ ಆಗಿರುವ ಸಿಎ ಶೇಖ್ ಸಫಿಉಲ್ಲಾಹ್ ಸಹಿ ಮಾಡಿದ ಆದೇಶವು ಪತ್ರವು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಅದರಲ್ಲಿ ಮುಂದಿನ ಆದೇಶವರೆಗೂ ಪ್ರೊ. ವೀರೇಂದ್ರ ಬಾಲಾಜಿ ಶಹಾರೆ ಅವರನ್ನು ಅಮಾನತುಗೊಳಿಸಿರುವುದನ್ನು ಉಲ್ಲೇಖಿಸಲಾಗಿದೆ.
ಅಮಾನತು ಅವಧಿಯಲ್ಲಿ ಪ್ರೊಫೆಸರ್ ಶಹಾರೆ ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಇಲ್ಲದೆ ದೆಹಲಿಯನ್ನು ಬಿಟ್ಟು ಹೋಗುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಜತೆಗೆ ನಿಯಮಗಳ ಪ್ರಕಾರ ಪೊಲೀಸ್ ಎಫ್‌ಐಆರ್ ದಾಖಲಿಸಲಾಗುವುದು ಎಂದು ಉಲ್ಲೇಖಿಸಲಾಗಿದೆ. ಆದರೆ ವಿಶ್ವವಿದ್ಯಾನಿಲಯದ ಅಧಿಕಾರಿಗಳು ಪ್ರಾಧ್ಯಾಪಕರ ವಿರುದ್ಧ ಎಫ್‌ಐಆರ್ ದಾಖಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಹಿರಿಯ ಸಲಹೆಗಾರ ಕಾಂಚನ್ ಗುಪ್ತಾ ಎಕ್ಸ್ ಖಾತೆಯಲ್ಲಿ ಅಮಾನತು ಸೂಚನೆಯನ್ನು ಹಂಚಿಕೊಂಡ ನಂತರ ಈ ವಿಚಾರವು ಮತ್ತಷ್ಟು ಗಮನ ಸೆಳೆಯಿತು. ‘ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿವಿಧ ಸಮುದಾಯದ ವಿದ್ಯಾರ್ಥಿಗಳನ್ನು ಒಳಗೊಂಡ ಕೇಂದ್ರೀಯ ವಿಶ್ವ ವಿದ್ಯಾಲಯ ಈ ಪ್ರಶ್ನೆಯು ದುರುದ್ದೇಶಪೂರಿತ ಉದ್ದೇಶವನ್ನು ತೋರಿಸುತ್ತದೆʼ ಎಂದು ಪತ್ರಿಕೆ ಸಿದ್ಧಪಡಿಸಿದವರನ್ನು ಗುಪ್ತಾ ಟೀಕಿಸಿದ್ದಾರೆ.

