Friday, September 5, 2025

400 ಕೆಜಿ RDX ಬಳಸಿ ಸ್ಫೋಟ: ಮುಂಬೈ ಗಣೇಶ ವಿಸರ್ಜನೆಗೂ ಮುನ್ನ ಬಂತು ಬಾಂಬ್ ಬೆದರಿಕೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅನಂತ ಚತುರ್ದಶಿ ಮತ್ತು ಗಣೇಶ ವಿಸರ್ಜನೆ ದಿನದ ಮುನ್ನೇ ಮುಂಬೈ ನಗರದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಲಕ್ಷಾಂತರ ಭಕ್ತರು ಬೀದಿಗಿಳಿಯಲಿರುವ ಈ ಸಮಯದಲ್ಲಿ, ಪೊಲೀಸರಿಗೆ ಬಂದಿರುವ ಬಾಂಬ್ ಬೆದರಿಕೆ ಸಂದೇಶ ನಗರದ ಭದ್ರತೆ ಬಗ್ಗೆ ಗಂಭೀರ ಚಿಂತೆಯನ್ನು ಹುಟ್ಟಿಸಿದೆ.

ಮುಂಬೈ ಸಂಚಾರ ಪೊಲೀಸರ ಅಧಿಕೃತ ವಾಟ್ಸಾಪ್ ಸಂಖ್ಯೆಗೆ ಬಂದಿರುವ ಸಂದೇಶದಲ್ಲಿ, ನಗರದಲ್ಲಿ 34 ವಾಹನಗಳಲ್ಲಿ ಬಾಂಬ್ ಇಡಲಾಗಿದೆ ಎಂದು ತಿಳಿಸಲಾಗಿದೆ. ಈ ಬೆದರಿಕೆ “ಲಷ್ಕರ್-ಎ-ಜಿಹಾದಿ” ಎಂಬ ಸಂಘಟನೆಯಿಂದ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆದರಿಕೆ ಸಂದೇಶದಲ್ಲಿ 14 ಪಾಕಿಸ್ತಾನಿ ಭಯೋತ್ಪಾದಕರು ಭಾರತ ಪ್ರವೇಶಿಸಿದ್ದಾರೆ ಮತ್ತು 400 ಕೆಜಿ ಆರ್‌ಡಿಎಕ್ಸ್ ಸ್ಫೋಟಕ್ಕೆ ಬಳಸಲಾಗುವುದು ಎಂದು ಹೇಳಲಾಗಿದೆ. ಈ ಮಾಹಿತಿ ಬಂದ ತಕ್ಷಣ ಮುಂಬೈ ಪೊಲೀಸರು ಎಚ್ಚೆತ್ತುಕೊಂಡಿದ್ದು, ಭದ್ರತೆ ಹೆಚ್ಚಿಸಲಾಗಿದೆ.

ಮುಂಬೈ ಪೊಲೀಸರು ಯಾವುದೇ ಅಪಾಯವನ್ನು ನಿರ್ಲಕ್ಷಿಸದೆ, ಬಂದಿರುವ ಪ್ರತಿಯೊಂದು ಮಾಹಿತಿಯನ್ನೂ ಪರಿಶೀಲನೆಗೆ ಒಳಪಡಿಸಿದ್ದಾರೆ. ಇಡೀ ಮಹಾರಾಷ್ಟ್ರದಲ್ಲಿ ಕಟ್ಟು ನಿಟ್ಟಿನ ಭದ್ರತಾ ಕ್ರಮಗಳನ್ನು ಜಾರಿಗೆ ತಂದಿದ್ದಾರೆ.

ಇದನ್ನೂ ಓದಿ