ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದ ವಿವಿಧ ಜಿಲ್ಲೆಗಳ ನ್ಯಾಯಾಲಯಗಳು ಹಾಗೂ ಪ್ರಮುಖ ಸರ್ಕಾರಿ ಕಚೇರಿಗಳಿಗೆ ಇತ್ತೀಚೆಗಷ್ಟೇ ಬಾಂಬ್ ಬೆದರಿಕೆ ಕರೆಗಳು ಬಂದಿದ್ದವು. ಈ ಆತಂಕದ ನೆರಳು ಮಾಸುವ ಮುನ್ನವೇ, ಈಗ ಬೆಂಗಳೂರಿನ ಹೆಬ್ಬಾಳದಲ್ಲಿರುವ ಕೇಂದ್ರೀಯ ವಿದ್ಯಾಲಯಕ್ಕೆ ಬಾಂಬ್ ಬೆದರಿಕೆ ಇಮೇಲ್ ಬಂದಿರುವುದು ಜನರಲ್ಲಿ ಆತಂಕ ಮೂಡಿಸಿದೆ.
ಶಾಲೆಯ ಅಧಿಕೃತ ಇಮೇಲ್ ಐಡಿಗೆ ಸಂದೇಶ ಕಳುಹಿಸಿರುವ ಕಿಡಿಗೇಡಿಗಳು, ಶಾಲೆಯ ಆವರಣದಲ್ಲಿ 3 RDX ಸ್ಫೋಟಕಗಳನ್ನು ಇಟ್ಟಿರುವುದಾಗಿ ಬೆದರಿಕೆ ಹಾಕಿದ್ದಾರೆ. ವಿಷಯ ತಿಳಿದ ತಕ್ಷಣ ಎಚ್ಚೆತ್ತ ಶಾಲೆಯ ಪ್ರಾಂಶುಪಾಲರಾದ ಪಿ.ಎಂ. ಪ್ರಕಾಶ್ ಅವರು ಸದಾಶಿವನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದೂರು ದಾಖಲಾಗುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಮತ್ತು ಶ್ವಾನ ದಳದ ಸಿಬ್ಬಂದಿ ಶಾಲೆಯ ಮೂಲೆ ಮೂಲೆಗಳನ್ನು ಜಾಲಾಡಿದ್ದಾರೆ. ಸುದೀರ್ಘ ಪರಿಶೀಲನೆಯ ನಂತರ ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗದ ಹಿನ್ನೆಲೆಯಲ್ಲಿ, ಇದೊಂದು ಹುಸಿ ಬಾಂಬ್ ಬೆದರಿಕೆ ಎಂಬುದು ದೃಢಪಟ್ಟಿದೆ.
ಕಳೆದ ಕೆಲವು ದಿನಗಳಿಂದ ಕೋಲಾರ, ಮೈಸೂರು, ಬಾಗಲಕೋಟೆ, ಧಾರವಾಡ ಮತ್ತು ಗದಗ ನ್ಯಾಯಾಲಯಗಳಿಗೆ ಹಾಗೂ ಲಾಲ್‌ಬಾಗ್ ರಸ್ತೆಯ ಪಾಸ್‌ಪೋರ್ಟ್ ಕಚೇರಿಗೂ ಇಂತಹದ್ದೇ ಹುಸಿ ಬೆದರಿಕೆಗಳು ಬಂದಿದ್ದವು. ಸದ್ಯ ಸದಾಶಿವನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಇಮೇಲ್ ಮೂಲದ ಬಗ್ಗೆ ತನಿಖೆ ಚುರುಕುಗೊಳಿಸಿದ್ದಾರೆ.

