Saturday, December 6, 2025

ಕುಸಿದ ತರಕಾರಿ ಬೆಲೆ: ಗ್ರಾಹಕರಿಗೆ ಖುಷಿಯಾದ್ರೆ, ಕಣ್ಣೀರಿಡುತ್ತಿದ್ದಾರೆ ರೈತರು, ವ್ಯಾಪಾರಸ್ಥರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇತ್ತೀಚಿನ ದಿನಗಳಲ್ಲಿ ತರಕಾರಿ ಮಾರುಕಟ್ಟೆಯಲ್ಲಿ ಗಮನಾರ್ಹ ಬದಲಾವಣೆ ಕಂಡುಬಂದಿದೆ. ಸಾಮಾನ್ಯವಾಗಿ ಶುಭ ಸಮಾರಂಭಗಳು ಮತ್ತು ಹಬ್ಬಗಳ ಕಾಲದಲ್ಲಿ ದುಬಾರಿಯಾಗುವ ತರಕಾರಿಗಳು, ಈ ಬಾರಿ ಅಚ್ಚರಿಯಂತೆ ಗಣನೀಯವಾಗಿ ಇಳಿಕೆ ಕಂಡಿವೆ. ದಿನನಿತ್ಯದ ಅಡುಗೆ ಖರ್ಚು ಹೆಚ್ಚುತ್ತಿದೆ ಎನ್ನುವ ಆತಂಕದಲ್ಲಿದ್ದ ಗ್ರಾಹಕರಿಗೆ ಈ ಬೆಲೆ ಇಳಿಕೆ ಸ್ವಲ್ಪ ನೆಮ್ಮದಿ ತಂದಿದ್ದು, ಇನ್ನೊಂದೆಡೆ ಉತ್ತಮ ಬೆಲೆ ನಿರೀಕ್ಷಿಸಿದ್ದ ರೈತರು ಹಾಗೂ ವ್ಯಾಪಾರಿಗಳಿಗೆ ಇದು ಸವಾಲಾಗಿ ಪರಿಣಮಿಸಿದೆ. ಬೇಡಿಕೆ–ಪೂರೈಕೆ ಸಮತೋಲನ, ಹವಾಮಾನ ಮತ್ತು ಬೆಳೆ ಇಳುವರಿ ಈ ದರ ಕುಸಿತಕ್ಕೆ ಪ್ರಮುಖ ಕಾರಣಗಳಾಗಿ ಪರಿಣಮಿಸುತ್ತಿವೆ.

ಈಗ ತರಕಾರಿ ಮಾರುಕಟ್ಟೆಗಳಲ್ಲಿ ನುಗ್ಗೆಕಾಯಿ ಹೊರತುಪಡಿಸಿ ಉಳಿದ ಎಲ್ಲಾ ತರಕಾರಿಗಳು ಕೈಗೆಟಕುವ ದರದಲ್ಲಿ ಲಭ್ಯವಿವೆ. ಬೀನ್ಸ್, ಬದನೆಕಾಯಿ, ಸೋರೆಕಾಯಿ, ಹೀರೆಕಾಯಿ, ಬೆಂಡೆಕಾಯಿ, ಮೆಣಸಿನಕಾಯಿ, ಟೊಮ್ಯಾಟೊ ಸೇರಿ ಬಹುತೇಕ ತರಕಾರಿಗಳ ಬೆಲೆ 10 ರಿಂದ 50 ರೂಪಾಯಿಗಳ ಮಿತಿಯಲ್ಲೇ ಇದೆ. ನುಗ್ಗೆಕಾಯಿ ಮಾತ್ರ ಇನ್ನೂ ಹೆಚ್ಚಿನ ದರದಲ್ಲಿಯೇ ಮಾರಾಟವಾಗುತ್ತಿದೆ.

ಮುಂದಿನ ದಿನಗಳಲ್ಲಿ ಧನುರ್ಮಾಸ ಆರಂಭವಾಗಲಿದ್ದು, ಈ ಅವಧಿಯಲ್ಲಿ ಶುಭ ಸಮಾರಂಭಗಳಿಗೆ ವಿರಾಮ ಸಿಗುತ್ತದೆ. ಇದರಿಂದ ತರಕಾರಿ ಬೇಡಿಕೆ ಇನ್ನಷ್ಟು ಕಡಿಮೆಯಾಗುವ ಸಾಧ್ಯತೆ ಇದ್ದು, ದರ ಇನ್ನೂ ಇಳಿಯಬಹುದು ಎಂಬ ಆತಂಕ ವ್ಯಕ್ತವಾಗಿದೆ.

error: Content is protected !!