ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಸೌಜನ್ಯ ಪರ ಹೋರಾಟಗಾರ ಮೇಲೆ ಸುಳ್ಳು ಕೇಸ್ ದಾಖಲಿಸಿ ದಮನ ಮಾಡುವ ಯತ್ನ ನಡೆಯುತ್ತಿದೆ ಎಂದು ಮನವಿ ಸಲ್ಲಿಸಲು ಬಂದ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರಿಗೆ ಮನವಿ ನೀಡಲು ನಿರಾಕರಿಸಿ ಬಳಿಕ ಅವಕಾಶ ಕಲ್ಪಿಸಿದ ಘಟನೆ ಬೆಳ್ತಂಗಡಿ ತಾಲೂಕು ಕಚೇರಿ ಮುಂಭಾಗ ನಡೆದಿದೆ.
ಇಂದು ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಪರವಾಗಿ ಪ್ರತಿಭಟನೆ ನಡೆಸಲು ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಅಧ್ಯಕ್ಷ ಅನಿಲ್ ಕುಮಾರ್ ಅನುಮತಿ ಕೇಳಿದ್ದರಾದರೂ ಪ್ರಕರಣ ಉಚ್ಛ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿ ಇರುವುದರಿಂದ ಪೊಲೀಸರು ಅವಕಾಶ ನಿರಾಕರಿಸಿದ್ದರು.
ಸೋಮವಾರ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಅಧ್ಯಕ್ಷ ಅನಿಲ್ ಕುಮಾರ್ ಅಂತರ ಅವರ ನೇತೃತ್ವದಲ್ಲಿ ಕಾರ್ಯಕರ್ತರ ತಂಡ ಬೆಳ್ತಂಗಡಿ ಮಿನಿ ವಿಧಾನ ಸೌಧದ ಮುಂಭಾಗಕ್ಕೆ ಆಗಮಿಸುತ್ತಿದ್ದಂತೆಯೇ ಬೆಳ್ತಂಗಡಿ ಇನ್ಸ್‌ಪೆಕ್ಟರ್ ಸುಬ್ಬಾಪುರ್ ಮಠ್ ಅವರ ನೇತೃತ್ವದಲ್ಲಿ ಪೊಲೀಸರು ಅವರನ್ನು ತಡೆದು ಇಲ್ಲಿ ಯಾವುದೇ ಪ್ರತಿಭಟನೆ ನಡೆಸಲು, ಮನವಿ ನೀಡಲು ಅವಕಾಶವಿಲ್ಲ ಎಂದು ಎಚ್ಚರಿಸಿ ವೇದಿಕೆ ಅಧ್ಯಕ್ಷ ಅನಿಲ್ ಕುಮಾರ್ ಅಂತರ, ಮುಖಂಡರುಗಳಾದ ಪ್ರಜ್ವಲ್ ಗೌಡ ಕೆವಿ, ಪ್ರದೀಪ್, ರವೀಂದ್ರ ಶೆಟ್ಟಿ, ಶ್ರೀನವಾಸ, ಉದಯ ಕೊಯ್ಯೂರು ಅವರನ್ನು ಪೊಲೀಸರು ವಶಕ್ಕೆ ಪಡೆದು ಬಳಿಕ ಬಿಡುಗಡೆ ಮಾಡಿದರು.
ಇದೇ ವೇಳೆ ಸೌಜನ್ಯ ತಾಯಿ ಕುಸುಮಾವತಿ, ಸೌಜನ್ಯ ಪರ ಹೋರಾಟಗಾರ್ತಿ ಪ್ರಸನ್ನ ರವಿ ಅವರು ತಾಲೂಕು ಕಚೇರಿಯ ಮುಂಭಾಗಕ್ಕೆ ಆಗಮಿಸಿದರು. ತಾಲೂಕು ಕಚೇರಿಗೆ ತೆರಳುವ ವೇಳೆ ಇವರನ್ನೂ ಪೊಲೀಸರು ತಡೆದರು. ಸಂದರ್ಭದಲ್ಲಿ ನಾವು ಪ್ರತಿಭಟನೆಗೆ ಬಂದಿಲ್ಲ ಮನವಿ ಸಲ್ಲಿಸಲು ಬಂದಿದ್ದೇವೆ ಅದಕ್ಕೆ ಅವಕಾಶ ನೀಡಿ ಎಂದು ಹೋರಾಟಗಾರರು ತಾಲೂಕು ಕಚೇರಿಯ ಮುಂಭಾಗದಲ್ಲಿಯೇ ಕುಳಿತರು ಕೆಲ ಹೊತ್ತು ತಹಶೀಲ್ದಾರರು ಹಾಗೂ ಪೊಲೀಸರೊಂದಿಗೆ ಮಾತುಕತೆ ನಡೆಸಿದ ಬಳಿಕ ಕೊನೆಗೂ ಪೊಲೀಸರು ಸೌಜನ್ಯ ತಾಯಿ ಕುಸುಮಾವತಿ, ಪ್ರಸನ್ನ ರವಿ ಹಾಗೂ ಮೋಹನ್ ಶೆಟ್ಟಿ ಅವರಿಗೆ ತಾಲೂಕು ಕಚೇರಿಗೆ ತೆರಳಿ ಮನವಿ ಸಲ್ಲಿಸಲು ಅವಕಾಶ ನೀಡಲಾಯಿತು.
ಮನವಿ ನೀಡಿದ ಬಳಿಕ ಮಾತನಾಡಿದ ಪ್ರಸನ್ನ ರವಿ ಅವರು ಪೊಲೀಸರು ಉದ್ದೇಶ ಪೂರ್ವಕವಾಗಿ ಮನವಿ ನೀಡಲು ಅವಕಾಶ ನೀಡದೆ ತಡೆಯುವ ಮೂಲಕ ಮೂಲಭೂತ ಹಕ್ಕನ್ನೇ ಕಸಿಯುವ ಪ್ರಯತ್ನ ನಡೆಸಿದ್ದಾರೆ. ಯಾವುದೇ ಪ್ರತಿಭಟನೆ ನಡೆಸಿಲ್ಲ ಯಾವುದೆ ಗಲಾಟೆ ಮಾಡಿಲ್ಲ ಆದರೆ ಪೊಲೀಸರು ಮನವಿ ನೀಡಲು ಬಂದವರನ್ನು ತಡೆದಿದ್ದಾರೆ ಎಂದು ಆರೋಪಿಸಿದರು.

