ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಲಯಾಳಂ ಚಿತ್ರರಂಗದ ಜನಪ್ರಿಯ ನಟಿ ಮೀರಾ ವಾಸುದೇವನ್ ಅವರು ತಮ್ಮ ಮೂರನೇ ವಿವಾಹವೂ ಅಂತ್ಯಗೊಂಡಿರುವುದಾಗಿ ಸಾಮಾಜಿಕ ಮಾಧ್ಯಮದಲ್ಲಿ ಅಧಿಕೃತವಾಗಿ ಘೋಷಿಸಿದ್ದಾರೆ. 2024ರಲ್ಲಿ ಛಾಯಾಗ್ರಾಹಕ ವಿಪಿನ್ ಪುತಿಯಂಕಂ ಅವರನ್ನು ಮೀರಾ ವಿವಾಹವಾಗಿದ್ದರು. ಈಗ, ಇಬ್ಬರೂ ಪ್ರತ್ಯೇಕವಾಗಲು ತೀರ್ಮಾನಿಸಿದ್ದರೆಂದು ತಿಳಿದುಬಂದಿದೆ.
ಮೀರಾ ತಮ್ಮ ಇನ್‌ಸ್ಟಾಗ್ರಾಂನಲ್ಲಿ, “ನಾನು ಆಗಸ್ಟ್ 2025ರಿಂದ ಒಂಟಿಯಾಗಿದ್ದೇನೆ. ಜೀವನದ ಅತ್ಯಂತ ಶಾಂತಿಯುತ ಹಂತದಲ್ಲಿದ್ದೇನೆ’’ ಎಂದು ಪೋಸ್ಟ್ ಮಾಡಿದ್ದಾರೆ. ಆದರೆ ಅವರ ಮಾಜಿ ಪತಿ ಈ ವಿಷಯಕ್ಕೆ ಇನ್ನೂ ಪ್ರತಿಕ್ರಿಯೆ ನೀಡಿಲ್ಲ. ಕಾನೂನು ಪ್ರಕ್ರಿಯೆಗಳು ಪೂರ್ಣಗೊಂಡಿವೆಯೇ ಎಂಬ ಪ್ರಶ್ನೆಗಳು ಅಭಿಮಾನಿಗಳಲ್ಲಿ ಹುಟ್ಟಿಕೊಂಡಿವೆ.
ಇದಕ್ಕೂ ಮುನ್ನ ಮೀರಾ 2005ರಲ್ಲಿ ವಿಶಾಲ್ ಅಗರ್ವಾಲ್ ಅವರನ್ನು ವಿವಾಹವಾಗಿದ್ದರು. ಆ ಮದುವೆ ಐದು ವರ್ಷಗಳಲ್ಲಿ ಮುಕ್ತಾಯವಾಯಿತು. ನಂತರ 2012ರಲ್ಲಿ ನಟ ಜಾನ್ ಕೊಕ್ಕೆನ್ ಅವರನ್ನು ಮೀರಾ ವಿವಾಹವಾಗಿದ್ದರು. 2016ರಲ್ಲಿ ಈ ದಂಪತಿ ಪ್ರತ್ಯೇಕಗೊಂಡರು. ಅವರಿಬ್ಬರಿಗೆ ಒಬ್ಬ ಮಗನಿದ್ದಾರೆ.
ಮೀರಾ ವಾಸುದೇವನ್ ಮಲಯಾಳಂ, ತಮಿಳು, ತೆಲುಗು ಮತ್ತು ಹಿಂದಿ ಚಿತ್ರಗಳಲ್ಲಿ ಪಾತ್ರ ನಿರ್ವಹಿಸಿ ಗುರುತಿಸಿಕೊಂಡಿರುವ ನಟಿ. ‘ತನ್ಮಾತ್ರ’, ‘ಉನ್ನೈ ಸರಣಡೈಂಥೇನ್’, ‘ರೂಲ್ಸ್’ ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯಿಸಿ ಅಭಿಮಾನಿಗಳ ಮೆಚ್ಚುಗೆ ಗಳಿಸಿದ್ದಾರೆ. ಇತ್ತೀಚೆಗೆ ಅವರು ‘ಯುನೈಟೆಡ್ ಕಿಂಗ್‌ಡಮ್ ಆಫ್ ಕೇರಳ’ ಚಿತ್ರದಲ್ಲೂ ಕಾಣಿಸಿಕೊಂಡಿದ್ದರು.

