ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಅನುಭವಿ ಆರಂಭಿಕ ಬ್ಯಾಟರ್ ಉಸ್ಮಾನ್ ಖವಾಜಾ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದಾರೆ. ಇಂದು ಬೆಳಿಗ್ಗೆ ನಡೆದ ಸುದ್ದಿಗೋಷ್ಠಿಯಲ್ಲಿ ಖವಾಜಾ ಈ ನಿರ್ಧಾರವನ್ನು ಅಧಿಕೃತವಾಗಿ ಪ್ರಕಟಿಸಿದರು.
ಇಂಗ್ಲೆಂಡ್ ವಿರುದ್ಧ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯಲಿರುವ ಐದನೇ ಆಶಸ್ ಟೆಸ್ಟ್ ಪಂದ್ಯವೇ ಅವರ ಕೊನೆಯ ಪಂದ್ಯವಾಗಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಚೊಚ್ಚಲ ಟೆಸ್ಟ್ ಆಡಿದ್ದ ಸಿಡ್ನಿಯಲ್ಲೇ ವಿದಾಯ ಹೇಳುತ್ತಿರುವುದು ತಮ್ಮ ಪಾಲಿಗೆ ಅತ್ಯಂತ ಭಾವನಾತ್ಮಕ ಕ್ಷಣ ಎಂದು ಖವಾಜಾ ಹೇಳಿದರು. ಈ ಸಂದರ್ಭ ಅವರ ಕುಟುಂಬದವರು ಉಪಸ್ಥಿತರಿದ್ದು, ಕಾರ್ಯಕ್ರಮವು ಭಾವುಕ ವಾತಾವರಣಕ್ಕೆ ಸಾಕ್ಷಿಯಾಯಿತು. ತರಬೇತಿ ಆರಂಭಕ್ಕೂ ಮುನ್ನ ತಂಡದ ಆಟಗಾರರಿಗೆ ನಿವೃತ್ತಿ ವಿಷಯ ತಿಳಿಸಿದಾಗ ಕಣ್ಣೀರು ತಡೆಯಲು ಸಾಧ್ಯವಾಗಲಿಲ್ಲ ಎಂದೂ ಅವರು ಹಂಚಿಕೊಂಡರು.
15 ವರ್ಷಗಳ ಕ್ರಿಕೆಟ್ ಪಯಣದಲ್ಲಿ ಆಸ್ಟ್ರೇಲಿಯಾ ಗೆಲುವುಗಳಲ್ಲಿ ಮಹತ್ವದ ಪಾತ್ರ ವಹಿಸಿದ್ದ ಖವಾಜಾ, ಕೆಲವು ಸಂದರ್ಭಗಳಲ್ಲಿ ತಂಡದೊಳಗಿನ ಅಸಮಾನ ಅನುಭವಗಳನ್ನೂ ಬಹಿರಂಗಪಡಿಸಿದರು. ಮುಸ್ಲಿಂ ಹಾಗೂ ಕಪ್ಪು ವರ್ಣೀಯ ಆಟಗಾರನಾಗಿ ಹಲವು ಸವಾಲುಗಳನ್ನು ಎದುರಿಸಿದ್ದೇನೆ ಎಂದ ಅವರು, ತಮ್ಮ ಪ್ರಯಾಣವು ಮುಂದಿನ ತಲೆಮಾರಿಗೆ ಧೈರ್ಯ ನೀಡಲಿ ಎಂಬ ಆಶಯ ವ್ಯಕ್ತಪಡಿಸಿದರು.
ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ಜನಿಸಿದ ಖವಾಜಾ, ನಂತರ ಆಸ್ಟ್ರೇಲಿಯಾಕ್ಕೆ ವಲಸೆ ಬಂದು ರಾಷ್ಟ್ರವನ್ನು ಪ್ರತಿನಿಧಿಸಿದ ಮೊದಲ ಮುಸ್ಲಿಂ ಕ್ರಿಕೆಟಿಗ ಎಂಬ ಗೌರವ ಪಡೆದರು. 87 ಟೆಸ್ಟ್, 40 ಏಕದಿನ ಮತ್ತು 9 ಟಿ20 ಪಂದ್ಯಗಳಲ್ಲಿ ಒಟ್ಟು 8,001 ರನ್ ಗಳಿಸಿರುವ ಅವರು, 2023ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಗೆಲುವಿನಲ್ಲೂ ಪ್ರಮುಖ ಪಾತ್ರವಹಿಸಿದ್ದರು.

