March 17, 2026
Tuesday, March 17, 2026
spot_img

ನಕ್ಕು ನಗಿಸಿದ ಕಲಾವಿದನಿಗೆ ವಿದಾಯ: ಎಂ.ಎಸ್. ಉಮೇಶ್ ನಿಧನಕ್ಕೆ ಗಣ್ಯರ ಸಂತಾಪ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕನ್ನಡ ಚಿತ್ರರಂಗದ ಪ್ರಖ್ಯಾತ ಹಾಸ್ಯ ಕಲಾವಿದ, ಹಿರಿಯ ನಟ ಎಂ.ಎಸ್. ಉಮೇಶ್ ಅವರು ತಮ್ಮ 80ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ತಮ್ಮ ಸಹಜ ಮತ್ತು ನವಿರಾದ ಹಾಸ್ಯಭರಿತ ಅಭಿನಯದ ಮೂಲಕ ಹಲವು ದಶಕಗಳ ಕಾಲ ಪ್ರೇಕ್ಷಕರನ್ನು ನಗಿಸುತ್ತಿದ್ದ ಉಮೇಶ್ ಅವರು ಕನ್ನಡ ಚಿತ್ರರಂಗವನ್ನು ಶ್ರೀಮಂತಗೊಳಿಸಿದ ಕಲಾವಿದರಲ್ಲಿ ಒಬ್ಬರು. ‘ಗುರು ಶಿಷ್ಯರು’, ‘ಹಾಲು ಜೇನು’, ‘ಅಪೂರ್ವ ಸಂಗಮ’ ಸೇರಿದಂತೆ ಅನೇಕ ಚಿತ್ರಗಳಲ್ಲಿ ಅವರ ಮನೋಜ್ಞ ಅಭಿನಯ ಸ್ಮರಣೀಯ. ಅವರ ನಿಧನವು ಕನ್ನಡ ಕಲಾಜಗತ್ತಿಗೆ ತುಂಬಲಾರದ ನಷ್ಟವಾಗಿದೆ.

ಹಿರಿಯ ನಟನ ಅಗಲಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಅನೇಕ ಗಣ್ಯರು, ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಸೋಷಿಯಲ್‌ ಮೀಡಿಯಾ ‘ಎಕ್ಸ್‌’ ಖಾತೆಯ ಮೂಲಕ ಪೋಸ್ಟ್‌ಗಳನ್ನು ಹಂಚಿಕೊಂಡು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಮೃತರ ಆತ್ಮಕ್ಕೆ ಶಾಂತಿ ಕೋರಿ, ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸಿದ್ದಾರೆ.

“ಕನ್ನಡ ಚಿತ್ರರಂಗದ ಹೆಸರಾಂತ ಹಾಸ್ಯನಟ ಉಮೇಶ್ ಅವರ ನಿಧನದ ಸುದ್ದಿ ನೋವು ತಂದಿದೆ. ತಮ್ಮ ಸಹಜ ಅಭಿನಯದ ಮೂಲಕ ಹಲವು ದಶಕಗಳ ಕಾಲ ಪ್ರೇಕ್ಷಕರನ್ನು ನಗಿಸುತ್ತಾ, ಕನ್ನಡಾಂಬೆಯ ಸೇವೆಗೈದ ಹಿರಿಯ ಜೀವಕ್ಕೆ ಭಾವಪೂರ್ಣ ವಿದಾಯಗಳು. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ.” ಎಂದು ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !