Wednesday, January 14, 2026
Wednesday, January 14, 2026
spot_img

ಬೆಳೆವಿಮೆ ವಿಳಂಬಕ್ಕೆ ರೈತರ ಆಕ್ರೋಶ: ಸುಳ್ಯ ತಾಲೂಕು ಕಚೇರಿ ಮುಂಭಾಗ ಬೃಹತ್ ಪ್ರತಿಭಟನೆ!

ಹೊಸದಿಗಂತ ಸುಳ್ಯ:

ಬೆಳೆವಿಮೆ ಪರಿಹಾರ ವಿತರಣೆಯಲ್ಲಿ ಉಂಟಾಗಿರುವ ತಾರತಮ್ಯ ಮತ್ತು ತಾಂತ್ರಿಕ ಸಮಸ್ಯೆಗಳನ್ನು ಖಂಡಿಸಿ ‘ಮಲೆನಾಡು ಹಿತರಕ್ಷಣಾ ವೇದಿಕೆ’ ವತಿಯಿಂದ ಸುಳ್ಯ ತಾಲೂಕು ಕಚೇರಿ ಮುಂಭಾಗ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯು ತೀವ್ರ ಸ್ವರೂಪ ಪಡೆದುಕೊಂಡಿದೆ. ಅಧಿಕಾರಿಗಳ ಗೈರುಹಾಜರಿ ಮತ್ತು ನಿರ್ಲಕ್ಷ್ಯದ ಧೋರಣೆಯನ್ನು ಖಂಡಿಸಿ ನೂರಾರು ರೈತರು ಕಚೇರಿ ಮುಂಭಾಗದಲ್ಲೇ ಧರಣಿ ಕುಳಿತಿದ್ದಾರೆ.

ಬೆಳೆವಿಮೆ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಬೇಕು ಎಂಬ ಒತ್ತಾಯದೊಂದಿಗೆ ಮಲೆನಾಡು ಹಿತರಕ್ಷಣಾ ವೇದಿಕೆ ಶಾಂತಿಯುತ ಪ್ರತಿಭಟನಾ ಸಭೆ ಆಯೋಜಿಸಿತ್ತು. ಸಭೆಯ ಬಳಿಕ ಮನವಿ ಸಲ್ಲಿಸಲು ರೈತರು ಮುಂದಾದಾಗ, ತಹಶೀಲ್ದಾರರು ಸ್ಥಳದಲ್ಲಿ ಇರಲಿಲ್ಲ. ಈ ವೇಳೆ ಉಪ ತಹಶೀಲ್ದಾರರು, “ತಹಶೀಲ್ದಾರರು ಮಂಗಳೂರಿಗೆ ತೆರಳಿದ್ದಾರೆ” ಎಂಬ ಉತ್ತರ ನೀಡಿದರು. ಇದರಿಂದ ಆಕ್ರೋಶಗೊಂಡ ರೈತರು, “ನಮ್ಮ ಸಮಸ್ಯೆಗಳನ್ನು ಆಲಿಸಬೇಕಾದ ಅಧಿಕಾರಿಗಳು ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ, ಇದು ರೈತರಿಗೆ ಬರೆಯುತ್ತಿರುವ ಮರಣ ಶಾಸನ” ಎಂದು ಕಿಡಿಕಾರಿದರು.

ತಹಶೀಲ್ದಾರ್ ಹಾಗೂ ಪುತ್ತೂರು ಸಹಾಯಕ ಆಯುಕ್ತರು ಸ್ಥಳಕ್ಕೆ ಖುದ್ದು ಆಗಮಿಸಿ ಮನವಿ ಸ್ವೀಕರಿಸಬೇಕು ಮತ್ತು ಸಮಸ್ಯೆಗಳಿಗೆ ಸೂಕ್ತ ಉತ್ತರ ನೀಡಬೇಕು ಎಂದು ಆಗ್ರಹಿಸಿ ರೈತರು ಘೋಷಣೆಗಳನ್ನು ಕೂಗುತ್ತಾ ಧರಣಿ ಆರಂಭಿಸಿದರು. ರೈತರಿಗೆ ಸರಿಯಾದ ನ್ಯಾಯ ಸಿಗುವವರೆಗೂ ಹೋರಾಟ ಕೈಬಿಡುವುದಿಲ್ಲ ಎಂದು ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ.

ಈ ಸಂದರ್ಭದಲ್ಲಿ ವೇದಿಕೆಯ ಮುಖಂಡರಾದ ಕಿಶೋರ್ ಶಿರಾಡಿ, ಹರೀಶ್ ಕಂಜಿಪಿಲಿ, ಎಂ. ವೆಂಕಪ್ಪ ಗೌಡ, ವಿಕ್ರಂ ಎ.ವಿ. ಅಡ್ಪಂಗಾಯ, ಸಂತೋಷ್ ಕುತ್ತಮೊಟ್ಟೆ, ಅವಿನಾಶ್ ಡಿ.ಕೆ., ನಾರಾಯಣ ಎಸ್.ಎಂ. ಶಾಂತಿನಗರ, ವಿನಯ ಕುಮಾರ್ ಕಂದಡ್ಕ, ಶಶಿಕಲಾ ನೀರಬಿದರೆ, ಪುಷ್ಪ ಮೇದಪ್ಪ, ಗುಣವತಿ ಕೊಲ್ಲಂತಡ್ಕ ಸೇರಿದಂತೆ ನೂರಾರು ರೈತರು ಧರಣಿಯಲ್ಲಿ ಪಾಲ್ಗೊಂಡಿದ್ದಾರೆ.

Most Read

error: Content is protected !!