ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರತಿ ಟನ್ ಕಬ್ಬಿಗೆ 3,500 ರೂ. ಬೆಂಬಲ ಬೆಲೆಗೆ ಒತ್ತಾಯಿಸಿ ರೈತರು ಬೆಳಗಾವಿ, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ನಡೆಯುತ್ತಿರುವ ಪ್ರತಿಭಟನೆ ತೀವ್ರಗೊಂಡಿದೆ.
ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಇಂದು ಮಧ್ಯಾಹ್ನದ ನಂತರ ಅವಳಿ ಜಿಲ್ಲೆಯಲ್ಲಿ ಬಂದ್ ಅಥವಾ ಹೆದ್ದಾರಿ ತಡೆ ನಡೆಸುವುದಾಗಿ ರೈತರು ಷರತ್ತು ವಿಧಿಸಿದ್ದರು. ಅದರಂತೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನಲ್ಲಿ ಬಂದ್ ನಡೆಸಿದ್ದರೆ ಬಾಗಲಕೋಟೆ ಜಿಲ್ಲೆಯ ರೈತರು ಜಿಲ್ಲೆಯ ಮೂರು ಸ್ಥಳಗಳಲ್ಲಿ ಹೆದ್ದಾರಿ ತಡೆ ನಡೆಸಿದ್ದಾರೆ.
ಬೆಳಗಾವಿಯಲ್ಲಿ ನಡೆಯುತ್ತಿರುವ ಕಬ್ಬು ಬೆಳೆಗಾರರ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದ್ದು ಹೆದ್ದಾರಿ ಬಂದ್ಗೆ ಮುಂದಾಗಿರುವ ರೈತರ ಮೇಲೆ ಪೊಲಿಸರು ಲಾಠಿಚಾರ್ಜ್ ನಡೆಸಿದ್ದಾರೆ. ಇದರಿಂದ ರೊಚ್ಚಿಗೆದ್ದ ರೈತರು ಲಾಠಿ ಚಾರ್ಜ್ಗೆ ಪ್ರತಿಯಾಗಿ ಪೊಲೀಸರ ವಾಹನದ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಇದರಿಂದ ಹತ್ತರಗಿ ರಾಷ್ಟ್ರೀಯ ಹೆದ್ದಾರಿ ಟೋಲ್ ಬಳಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ.
ಬಾಗಲಕೋಟೆಯ ರೈತರು ಹುಬ್ಬಳ್ಳಿ ಮತ್ತು ಸೋಲಾಪುರಕ್ಕೆ ಸಂಪರ್ಕಿಸುವ ಗಡ್ಡಕೇರಿ ಹೆದ್ದಾರಿ 218, ವಿಜಯಪುರ ಮತ್ತು ಧಾರವಾಡಕ್ಕೆ ಸಂಪರ್ಕಿಸುವ ಮುಧೋಳ ತಾಲೂಕಿನ ಮುದ್ದಾಪುರ ಗ್ರಾಮದ ಹೆದ್ದಾರಿ ಮತ್ತು ಜಿಲ್ಲೆಯ ಕಮತಗಿ ಗ್ರಾಮದ ಹೆದ್ದಾರಿಯನ್ನು ತಡೆದಿದ್ದರು. ಬೆಳಿಗ್ಗೆಯಿಂದಲೇ ರಸ್ತೆ ತಡೆ ಆರಂಭವಾಯಿತು. ಇದರಿಂದಾಗಿ ಬಾಗಲಕೋಟೆಯ ಮೂರು ಸ್ಥಳಗಳಲ್ಲಿಯೂ ಸಂಚಾರ ಸ್ಥಗಿತಗೊಂಡಿತ್ತು. ರೈತರು ರಸ್ತೆ ತಡೆ ನಡೆಸಿ ಬ್ಯಾರಿಕೇಡ್‌ಗಳನ್ನು ಹಾಕಿದ್ದ ವಾಹನಗಳು ಸಾಲುಗಟ್ಟಿ ನಿಂತಿವೆ. ವಿವಿಧ ಮಠಾಧೀಶರ ರೈತ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ.

