Saturday, November 15, 2025

ಸರಿಯಾದ ಬೆಲೆ ಕೊಡದಿದ್ದರೆ ಸಿಎಂ, ಸಚಿವರ ಕಚೇರಿ ಎದುರು ಕಬ್ಬು ಸುಟ್ಟು ಹಾಕ್ತೇವೆ; ರೈತರ ಎಚ್ಚರಿಕೆ

ಹೊಸದಿಗಂತ ವರದಿ ಬೀದರ್:

ಸರ್ಕಾರ ಘೋಷಿಸಿರುವ ಪ್ರತಿ ಟನ್ ಕಬ್ಬಿಗೆ ₹3,100 ಬೆಲೆ, ರೈತರಿಗೆ ಸೂಕ್ತ ಬೆಲೆಯಾದ ₹3300 ಕೊಡಲೇಬೇಕೆಂದು ಪಟ್ಟು ಹಿಡಿದ ಕಬ್ಬು ಬೆಳೆಗಾರರು ರೈತ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಹೋರಾಟ ಮತ್ತೆ ಪುನಾರಂಭಿಸಿದ್ದಾರೆ.

ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ನೇತೃತ್ವದಲ್ಲಿ ಈ ಹಿಂದೆ ಎರಡು ಸಭೆ ನಡೆಸಲಾಗಿತ್ತು. ಜಿಲ್ಲಾಧಿಕಾರಿಗಳು ₹2,850 ನೀಡುವುದಾಗಿ ತಿಳಿಸಿದರು. ಅದಕ್ಕೆ ಒಪ್ಪದ ರೈತರು ಕಬ್ಬಿನ ಬೆಲೆ ನಿಗದಿಪಡಿಸಲು ಆಗ್ರಹಿಸಿ ಬುಧವಾರ ಹುಮನಾಬಾದ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ತಮ್ಮ ಬೇಡಿಕೆಗಳ ಮುಟ್ಟುವಂತೆ ಮಾಡಿದರು. ಪ್ರತಿಭಟನೆಗೆ ಕಾಂಗ್ರೆಸ್, ಬಿಜೆಪಿ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಸಾಥ್ ನೀಡಿದರು.

ಬುಧವಾರ ಪ್ರತಿಭಟನಾ ನಿರತ ರೈತರಿಗೆ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಭೇಟಿ ನೀಡಿ ಮನವಿ ಪತ್ರ ಸ್ವೀಕರಿಸಿ ಗುರುವಾರ ಮತ್ತೊಂದು ಸಭೆ ಮಾಡುವುದಾಗಿ ರೈತರಿಗೆ ಭರವಸೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಿಲ್ಲೆಯ ಸಕ್ಕರೆ ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕರು, ಕಬ್ಬು ಬೆಳೆಗಾರರು ಹಾಗೂ ರೈತ ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು.

ಈ ವೇಳೆ ಮಾತನಾಡಿದ ರೈತ ಮುಖಂಡರು ‘ಈ ವರ್ಷ ಅತಿವೃಷ್ಟಿಯಿಂದಾಗಿ ಬಹುತೇಕ ಬೆಳೆಗಳು ಸಂಪೂರ್ಣ ಹಾಳಾಗಿದ್ದು, ರೈತರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಪ್ರತಿ ಟನ್ ಕಬ್ಬಿಗೆ ಕನಿಷ್ಠ ₹3,100 ದರ ನಿಗದಿಪಡಿಸಬೇಕು’ ಎಂದು ಸಭೆಯಲ್ಲಿ ಆಗ್ರಹಿಸಿದರು.

ಅದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಈ ಸಭೆಯ ಉದ್ದೇಶ ‘ರೈತರು ಹಾಗೂ ಕಾರ್ಖಾನೆಗಳು ಇಬ್ಬರೂ ಉಳಿಯಬೇಕು ಅರದಂತೆ ಮಾರ್ಗ ಕಂಡುಕೊಳ್ಳಲು ಈ ಸಭೆ ನಡೆಸಲಾಗುತ್ತಿದೆ ಬೀದರ್ ಜಿಲ್ಲೆಯಲ್ಲಿ ಕಬ್ಬಿಗೆ 9.6ರಷ್ಟು ರಿಕವರಿ ಇದೆ. ಹಾವೇರಿಯಲ್ಲಿಯೂ ಸಹ ಇಷ್ಟೇ ಇದೆ. ಅಲ್ಲಿಯ ರೈತರು ₹2,900 ದರಕ್ಕೆ ಒಪ್ಪಿಕೊಂಡಿದ್ದಾರೆ. ನಿಮಗೂ ಅದೇ ದರ ನೀಡುತ್ತೇವೆ’ ಈ ದರ ವೈಜ್ಞಾನಿಕ ಆಧಾರದ ಮೇಲೆ ಪ್ರಸ್ತಾಪಿಸಿದ್ದು ಎಂದು ಹೇಳಿದರು.

ಬೀದರ್ ಜಿಲ್ಲೆಯಲ್ಲಿ ಪ್ರತಿ ಟನ್ ಕಬ್ಬಿಗೆ ₹2,900 ದರ ನಿಗದಿಪಡಿಸುವುದಾಗಿ ಎಂದ ಅವರು, ಕಳೆದ ವರ್ಷಕ್ಕಿಂತ ₹250 ಹೆಚ್ಚಿನ ದರ ರೈತರಿಗೆ ಲಭಿಸಲಿದೆ. ಅಲ್ಲದೇ ₹2,900 ದರದಂತೆ ಕಾರ್ಖಾನೆಗಳು ತಪ್ಪದೇ ಜಮೆ ಮಾಡುವಂತೆ ತಾವು ಜವಾಬ್ದಾರಿ ತೆಗೆದುಕೊಳ್ಳುವುದಾಗಿ ಜಿಲ್ಲಾಧಿಕಾರಿಗಳು ರೈತ ಮುಖಂಡರಿಗೆ ಭರವಸೆ ನೀಡಿದರು.

ಸಭೆಯಲ್ಲಿ ಪ್ರಸ್ತಾಪಿಸಿದ ಕಬ್ಬಿಗೆ ₹2,900 ಬೆಲೆ ನಿಗದಿಗೆ ಒಮ್ಮತ ಸೂಚಿಸದ ರೈತ ಮುಖಂಡರು ತಮ್ಮ ಹೋರಾಟ ಮುಂದುವರೆಸುವುದಾಗಿ ತಿಳಿಸಿ ಹೊರ ಬಂದರು. ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರ ಕಾರ್ಯಾಲಯ ಎದುರು ಧರಣಿ ಆರಂಭಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ನ್ಯಾಯಯುತ ಬೆಲೆ ನಿಗದಿಗೆ ಆಗ್ರಹಿಸಿದರು.

‘ಬೀದರ್ ಜಿಲ್ಲೆಯಲ್ಲಿ ಸುಮಾರು 50 ಸಾವಿರ ಎಕರೆಯಲ್ಲಿ ಕಬ್ಬು ಬೆಳೆಯಲಾಗಿದ್ದು, 15 ಲಕ್ಷ ಟನ್‌ಗಳಿಗಿಂತ ಅಧಿಕ ಉತ್ಪಾದನೆ ನಿರೀಕ್ಷೆಯಿದೆ. ಈ ಪರಿಸ್ಥಿತಿಯಲ್ಲಿ ರೈತರಿಗೆ ನ್ಯಾಯಯುತ ಬೆಲೆ ನೀಡಬೇಕು. ಕನಿಷ್ಠ ₹3,100 ಬೆಲೆ ಕೊಡದಿದ್ದರೆ ಜಿಲ್ಲಾದ್ಯಂತ ಹೋರಾಟ ಚುರುಕುಗೊಳಿಸಲಾಗುವುದು’ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ ಎಚ್ಚರಿಕೆ ನೀಡಿದರು.

‘ಜಿಲ್ಲಾಧಿಕಾರಿಗಳು ಈ ಹಿಂದೆ ನಡೆಸಿದ ಎರಡು ಸಭೆಗಳು ಫಲಕಾರಿಯಾಗದ ಕಾರಣ ಮೂರನೇ ಸಭೆಯಲ್ಲಿ ಕಬ್ಬಿಗೆ ಸೂಕ್ತ ಬೆಲೆ ನಿಗದಿ ಆಗುವ ನಿರೀಕ್ಷೆ ಇಟ್ಟಿದ್ದೇವು ಅದೂ ಕೂಡ ಫಲಿಸದ ಕಾರಣ ಸರ್ಕಾರಿ ತಂತ್ರ ಹಾಗೂ ಕಾರ್ಖಾನೆಗಳ ಮೇಲಿಂದ ನಮ್ಮ ವಿಶ್ವಾಸ ಕ್ಷೀಣಿಸಿದೆ. ನಮ್ಮ ಕಾರ್ಖಾನೆಗಳು ರೈತರನ್ನು ಶೋಷಣೆಗೆ ಒಳಪಡಿಸುತ್ತಿವೆ. ಕಬ್ಬಿಗೆ ಕನಿಷ್ಠ ₹3,100 ಬೆಲೆ ನೀಡಲೇಬೇಕು.

ಶನಿವಾರ ಮಧ್ಯಾಹ್ನ ರೈತರಿಂದ ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಕಛೇರಿವರೆಗೆ ಉರುಳು ನಮಸ್ಕಾರ ಹಾಕುವ ಮೂಲಕ ಪ್ರತಿಭಟನೆ ನಡೆಸಿದರು‌. ಉಸ್ತುವಾರಿ ಸಚಿವ ಕಛೇರಿ ಒಳಗಡೆ ಹೋಗದಂತೆ ರೈತರನ್ನು ತಡೆದ ಪೊಲೀಸರು ಕೆಲಹೋತ್ತು ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು.

ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿರುವ ಅವರು ಸಹೋದರ ಅಮರ್ ಖಂಡ್ರೆ ಅವರ ದಬ್ಬಾಳಿಕೆಯ ಕಾರಣ ಜಿಲ್ಲೆಯಲ್ಲಿ ಸಕ್ಕರೆ ಕಾರ್ಖಾನೆ ಮಾಲೀಕರು ಹಾಗೂ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದು ಈ ಕಾರಣದಿಂದಲೇ ರೈತರಿಗೆ ಕಬ್ಬಿಗೆ ಸೂಕ್ತ ಬೆಲೆ ಸಿಗದಂತೆ ತಡೆಯಲಾಗುತ್ತಿದೆ ಅವರು ಸರ್ವಾಧಿಕಾರಿ ಧೋರಣೆ ಮುಂದುವರೆದರೆ ಜಿಲ್ಲೆಯ ರೈತರು ಬೆಳೆದ ಎಲ್ಲಾ ಕಬ್ಬು ಅವರ ಕಛೇರಿ ಹಾಗೂ ಅವರ ನಿವಾಸದ ಎದುರು ಸುಟ್ಟು ಉಗ್ರ ಪ್ರತಿಭಟನೆ ನಡೆಸುವುದಾಗಿ ಹೇಳಿದರು.

ಉರುಳು ಪ್ರತಿಭಟನೆಯಲ್ಲಿ ಮಲ್ಲಿಕಾರ್ಜುನ ಸ್ವಾಮಿ,ಶ್ರೀಕಾಂತ ಸ್ವಾಮಿ, ಸಿದ್ರಾಮಪ್ಪಾ ಆಣದೂರೆ, ದಯಾನಂದ ಸ್ವಾಮಿ, ಸುಮಂತ್ ಗ್ರಾಮಲೆ,ರಮೆಶ ಕೌಠಾ(ಬಿ) ಶಂಕರೆಪ್ಪಾ ಮರ್ಕಲ್, ಕೊಂಡಿಬಾ ಪಾಂಡ್ರೆ, ಶಿವರಾಜ ಪಾಟೀಲ್, ಬಾಬುರಾವ್ ಹೊನ್ನಾ, ನಜೀರ್ ಅಹ್ಮದ್ ಚೊಂಡಿ, ಪ್ರಕಾಶ ಬಾವಗೆ, ಶಾಂತಮ್ಮ ಮೂಲಗೆ, ಶಿವಲೀಲಾ ಹೋಳಸಮುದ್ರ, ಬಸವರಾಜ ಅಷ್ಟೂರೆ, ವಿಜಯಕುಮಾರ ಬಾವಗೆ, ವೀರಾರೆಡ್ಡಿ, ವಿಠಲರಾವ, ನಾಗಶೆಟ್ಟಿ, ಭೀಮರಾವ, ಖಮರ ಪಟೇಲ್ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ರೈತರು ಉಪಸ್ಥಿತರಿದ್ದರು.

error: Content is protected !!