ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಟ್ಲ ಸಮೀಪದ ಮುಳಿಯ ಗುಡ್ಡೆತೋಟ ತಿರುವಿನಲ್ಲಿ ಸರ್ಕಾರಿ ಬಸ್ ಹಾಗೂ ಓಮ್ನಿಯ ನಡುವೆ ಅಪಘಾತ ನಡೆದಿದ್ದು, ಓಮ್ನಿ ಚಾಲಕ ಮೃತ ಪಟ್ಟು ಇಬ್ಬರು ಗಂಭೀರ ಗಾಯಗೊಂಡಿದ್ದಾರೆ.
ಮೈರ ಕಿಞಣ್ಣಮೂಲೆ ನಿವಾಸಿ ಮೋನಪ್ಪ ಕುಲಾಲ್ (೬೭) ಮೃತಪಟ್ಟಿದ್ದಾರೆ. ಮೃತರ ತಮ್ಮನ ಪತ್ನಿ ರಮಣಿ ಕುಲಾಲ್ ಗಂಭೀರ ಗಾಯಗೊಂಡಿದ್ದಾರೆ. ಮೃತರ ಪತ್ನಿ ಲಲಿತಾ ಕುಲಾಲ್ ಗಾಯಗೊಂಡಿದ್ದಾರೆ. ಘಟನೆ ನಡೆಯುತ್ತಿದ್ದಂತೆ ವಿಟ್ಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಓರ್ವ ಮೃತ ಪಟ್ಟಿದ್ದು, ಇಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ವರ್ಗಾಯಿಸಲಾಗಿದೆ.

ಕುದ್ದುಪದವಿನಿಂದ ಪೆರುವಾಯಿ ಕಡೆಗೆ ಸಾಗುತ್ತಿದ್ದ ಓಮ್ನಿ ಹಾಗೂ ಪಕಳಕುಂಜದಿಂದ ಕುದ್ದುಪದವು ಕಡೆಗೆ ಬರುತ್ತಿದ್ದ ಸರ್ಕಾರಿ ಬಸ್ ನಡುವೆ ಅಪಘಾತಗಿದೆ. ತಿರುವಿನಲ್ಲಿ ಎದುರಿನಿಂದ ಬರುವ ವಾಹನಗಳ ಮಾಹಿತಿ ತಿಳಿಯದೆ ಈ ಘಟನೆ ನಡೆದಿರುವ ಸಾಧ್ಯತೆಯಿದೆ. ಘಟನೆಯ ತೀವ್ರತೆಗೆ ಓಮ್ನಿಯ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಓಮ್ನಿಯಲ್ಲಿದ್ದವರು ಉಪ್ಪಳ ಸಮೀಪದಲ್ಲಿ ನಡೆಯುತ್ತಿದ್ದ ಗೃಹಪ್ರವೇಶ ಕಾರ್ಯಕ್ರಮಕ್ಕೆ ತೆರಳುತ್ತಿದ್ದರೆನ್ನಲಾಗಿದೆ.

