February 28, 2026
Saturday, February 28, 2026
spot_img

ರಾಯಚೂರಿನಲ್ಲಿ ಭೀಕರ ಅಪಘಾತ: ಟ್ರಕ್ ಅಡಿಗೆ ಸಿಲುಕಿ ಮೂವರು ಯುವಕರ ದುರ್ಮರಣ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಗರದ ಜನನಿಬಿಡ ಪ್ರದೇಶವಾದ ಬಸವೇಶ್ವರ ವೃತ್ತದಲ್ಲಿ ಶನಿವಾರ ಘೋರ ದುರಂತವೊಂದು ಸಂಭವಿಸಿದೆ. ವೇಗವಾಗಿ ಬಂದ ಟ್ರಕ್ ಮತ್ತು ಬೈಕ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಮೂವರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ನಗರದ ಸುಖಾಣಿ ಕಾಲೋನಿಯ ನಿವಾಸಿಗಳಾದ ಮೊಹಮ್ಮದ್ ಅಲಿ (24), ನೂರ್ ಮೊಹಮ್ಮದ್ (19) ಮತ್ತು ಫಯಾಜ್ (26) ಮೃತಪಟ್ಟ ದುರ್ದೈವಿಗಳು. ಇವರು ಬಸವೇಶ್ವರ ವೃತ್ತದಿಂದ ಚಂದ್ರಮೌಳೇಶ್ವರ ವೃತ್ತದ ಕಡೆಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದರು. ಈ ವೇಳೆ ಹೈದರಾಬಾದ್‌ನಿಂದ ಮಂತ್ರಾಲಯದ ಕಡೆಗೆ ಸಾಗುತ್ತಿದ್ದ ಲಾರಿಯು ಬೈಕ್‌ಗೆ ಬಲವಾಗಿ ಡಿಕ್ಕಿ ಹೊಡೆದಿದೆ.

ಅಪಘಾತದ ತೀವ್ರತೆ ಎಷ್ಟಿತ್ತೆಂದರೆ, ಬೈಕ್‌ನಲ್ಲಿದ್ದ ಮೂವರು ಯುವಕರು ರಸ್ತೆಗೆ ಎಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಅಪಘಾತ ಸಂಭವಿಸುತ್ತಿದ್ದಂತೆ ಟ್ರಕ್ ಚಾಲಕ ವಾಹನದ ಸಮೇತ ಸ್ಥಳದಿಂದ ಪರಾರಿಯಾಗಿದ್ದಾನೆ. ವಿಷಯ ತಿಳಿದ ತಕ್ಷಣ ರಾಯಚೂರು ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸಿದ್ದಾರೆ. ಸದ್ಯ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಹಿಟ್ ಅಂಡ್ ರನ್ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಚಾಲಕನಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !