ಹೊಸದಿಗಂತ ಡಿಜಿಟಲ್ ಡೆಸ್ಕ್:
ವೇಗವಾಗಿ ಚಲಿಸುತ್ತಿದ್ದ ಕಾರು ರಸ್ತೆ ಬದಿಯ ಬ್ಯಾರಿಕೇಡ್‌ಗೆ ಡಿಕ್ಕಿ ಹೊಡೆದು, ಉರುಳಿ ಬಿದ್ದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟು ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆಯೊಂದು ಬೆಂಗಳೂರಿನ ನೈಸ್ ರಸ್ತೆಯ ವರಹಸಂದ್ರ ಜಂಕ್ಷನ್ ಸಮೀಪ (ತಲಘಟ್ಟಪುರ ಟ್ರಾಫಿಕ್ ಪೊಲೀಸ್ ಠಾಣಾ ವ್ಯಾಪ್ತಿ) ನಡೆದಿದೆ.
ಮೃತರನ್ನು ತುಮಕೂರು ಜಿಲ್ಲೆಯ ಮಧುಗಿರಿ ನಿವಾಸಿಗಳಾದ ದೇವರಾಜ್ (32 ಹಾಗೂ ಅಶೋಕ್ (23) ಎಂದು ಗುರುತಿಸಲಾಗಿದೆ. ಗಾಯಗೊಂಡಿರುವ ಶ್ರೀನಿವಾಸ್, ಮದನ್ ಮತ್ತು ಮಹಾಂತೇಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಹೊಸಕೆರೆಹಳ್ಳಿ ಟೋಲ್ ಬದಿಯಿಂದ ನೆಲಮಂಗಲ ಕಡೆಗೆ ದೇವರಾಜ್ ಅವರು ಅತಿವೇಗದಲ್ಲಿ ಕಾರು ಚಲಾಯಿಸುತ್ತಿದ್ದಾಗ ಬೆಳಗಿನ ಜಾವ 4.20 ರ ಸುಮಾರಿಗೆ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಕೈಗೊಂಡಿದ್ದಾರೆ.

