ಹೊಸದಿಗಂತ ವರದಿ ಉಳ್ಳಾಲ:
ಮಂಗಳೂರಿನಿಂದ ಕೇರಳಕ್ಕೆ ನಾಲ್ಕು ಲಕ್ಷ ರೂಪಾಯಿ ಮೌಲ್ಯದ ನಿಷೇಧಿತ ಎಮ್ ಡಿಎಮ್ಎ ಡ್ರಗ್ಸನ್ನು ಸಾಗಾಟ ನಡೆಸುತ್ತಿದ್ದ ಕಾರೊಂದು ತಲಪಾಡಿಯಲ್ಲಿ ನಿಂತಿದ್ದ ಟ್ಯಾಂಕರ್ ಒಂದಕ್ಕೆ ಡಿಕ್ಕಿ ಹೊಡೆದಿದೆ.
ಮಂಗಳವಾರ ಬೆಳಿಗ್ಗೆ ಅಪಘಾತ ಸಂಭವಿಸಿದ್ದು, ಈ ವೇಳೆ ಕಾರು ಚಾಲಕ ಪರಾರಿಯಾಗಿದ್ದಾನೆ. ಸಹ ಸವಾರ ಗಂಭೀರ ಗಾಯಗೊಂಡು ಆಸ್ಪತ್ರೆ ಸೇರಿದ್ದಾನೆ.
ಮಂಗಳವಾರ ಬೆಳಿಗ್ಗೆ 7 ಗಂಟೆ ವೇಳೆ ಮಂಗಳೂರಿನಿಂದ ಉಪ್ಪಳದ ಕಡೆಗೆ ಧಾವಿಸುತ್ತಿದ್ದ ಕಾರು ತಲಪಾಡಿಯ ಆರ್ ಟಿಓ ಚೆಕ್ ಪೋಸ್ಟ್ ಬಳಿ ನಿಂತಿದ್ದ ಟ್ಯಾಂಕರ್ಗೆ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಕಾರಿನ ಮುಂಭಾಗವು ನಜ್ಜುಗುಜ್ಜಾಗಿದ್ದು ಕಾರಿನಲ್ಲಿದ್ದ ಸಹಸವಾರ ಆದಮ್ ಗಂಭೀರ ಗಾಯಗೊಂಡಿದ್ದಾನೆ.
ಗಾಯಾಳು ಆದಮ್ ನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.ಕಾರು ಚಾಲಕ ಸಿದ್ಧೀಕ್ ಎಂಬಾತ ಪರಾರಿಯಾಗಿದ್ದು ,ಕಾರಿನಲ್ಲಿದ್ದ 3.90 ಲಕ್ಷ ಮೌಲ್ಯದ 78 ಗ್ರಾಂ ಎಮ್ ಡಿಎಮ್ಎ ಮಾದಕ ಪದಾರ್ಥವನ್ನು ಉಳ್ಳಾಲ ಪೊಲೀಸರು ದಸ್ತಗಿರಿ ನಡೆಸಿದ್ದು ಪ್ರಕರಣ ದಾಖಲಿಸಿದ್ದಾರೆ.
ಕಾರಿನಲ್ಲಿದ್ದ ಸಿದ್ಧೀಕ್ ಮತ್ತು ಆದಮ್ ಕಾಸರಗೋಡು ಜಿಲ್ಲೆಯ ಉಪ್ಪಳ ನಿವಾಸಿಗಳೆಂದು ತಿಳಿದು ಬಂದಿದೆ.
ಅಪಘಾತದ ಕುರಿತಂತೆ ಮಂಗಳೂರು ದಕ್ಷಿಣ ಸಂಚಾರಿ ಪೊಲೀಸರು ಪ್ರತ್ಯೇಕ ಪ್ರಕರಣ ದಾಖಲಿಸಿದ್ದಾರೆ.
ಮಂಗಳೂರಿನಿಂದ ಕೇರಳಕ್ಕೆ ಡ್ರಗ್ಸ್ ಸಾಗಾಟದ ವೇಳೆ ಭೀಕರ ಅಪಘಾತ: ಚಾಲಕ ಪರಾರಿ

