ಹೊಸದಿಗಂತ ಡಿಜಿಟಲ್ ಡೆಸ್ಕ್:
ಭೂ ಭೂವಿವಾದದ ಹಿನ್ನಲೆ ಯುವಕನೊಬ್ಬ ಪ್ರಾಣತೆತ್ತ ದಾರುಣ ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆಯ ಕನಕಪುರ ತಾಲೂಕಿನ ಗೆಂಡೆಕೆರೆ ಗ್ರಾಮದಲ್ಲಿ ನಡೆದಿದೆ.
ಮೃತನನ್ನು ಸುನೀಲ್ (30) ಎಂದು ಗುರುತಿಸಲಾಗಿದ್ದು, ಈ ಹತ್ಯೆ ಪ್ರಕರಣದಲ್ಲಿ ಪಾರ್ಥಸಾರಥಿ ಮತ್ತು ಅವರ ಪುತ್ರ ಆಕಾಶ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಸುನೀಲ್ ಅವರ ತಂದೆ ಮುನಿರಾಜು ಹಿಂದೆ ಪಾರ್ಥಸಾರಥಿಗೆ ಸುಮಾರು ಒಂದೂವರೆ ಎಕರೆ ಜಮೀನು ಮಾರಾಟ ಮಾಡಿದ್ದರು. ಈ ವ್ಯವಹಾರದ ಬಗ್ಗೆ ಸ್ಪಷ್ಟತೆ ಪಡೆಯಲು ಸುನೀಲ್ ಮತ್ತು ಅವರ ಸಹೋದರ ಕಿರಣ್ ಪಾರ್ಥಸಾರಥಿಯ ಮನೆಗೆ ತೆರಳಿದಾಗ ವಿವಾದ ಉಂಟಾಗಿದೆ.
ಮಾತಿನ ಚಕಮಕಿ ಹೆಚ್ಚಿದ ಪರಿಣಾಮವಾಗಿ, ಪಾರ್ಥಸಾರಥಿ ಮತ್ತು ಅವರ ಪುತ್ರ ಆಕಾಶ್ ಇಬ್ಬರೂ ಸೇರಿ ಸುನೀಲ್ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ, ಬಳಿಕ ಕಲ್ಲಿನಿಂದ ಹೊಡೆದು ಕೊಲೆ ಮಾಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಘಟನೆಯ ಬಳಿಕ ಸ್ಥಳಕ್ಕೆ ಧಾವಿಸಿದ ಕನಕಪುರ ಗ್ರಾಮಾಂತರ ಠಾಣೆಯ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಮುಂದಿನ ತನಿಖೆ ಪ್ರಗತಿಯಲ್ಲಿದೆ.