ಹೊಸದಿಗಂತ ಬಳ್ಳಾರಿ:
ಇರಾನ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಭೀಕರ ವೈಮಾನಿಕ ದಾಳಿಯ ಕಿಚ್ಚು ಈಗ ದುಬೈ ಪ್ರವಾಸದಲ್ಲಿರುವ ಕನ್ನಡಿಗರನ್ನು ಆತಂಕಕ್ಕೆ ತಳ್ಳಿದೆ. ಪ್ರವಾಸಕ್ಕಾಗಿ ದುಬೈಗೆ ತೆರಳಿದ್ದ ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಸೇರಿದಂತೆ ಜಿಲ್ಲೆಯ ಸುಮಾರು 50 ಜನರ ತಂಡ ಯುದ್ಧದ ಭೀತಿಯಿಂದಾಗಿ ಅಲ್ಲಿಯೇ ಸಿಲುಕಿಕೊಂಡಿದೆ.
ಅಮೆರಿಕ ಮತ್ತು ಇಸ್ರೇಲ್ ಪಡೆಗಳು ಜಂಟಿಯಾಗಿ ನಡೆಸುತ್ತಿರುವ ‘ಆಪರೇಷನ್ ಎಪಿಕ್ ಪ್ಯೂರಿ’ ದಾಳಿಯಿಂದಾಗಿ ದುಬೈನಲ್ಲಿ ವಿಮಾನಯಾನ ವ್ಯತ್ಯಯಗೊಂಡಿದೆ. ಹೀಗಾಗಿ ತವರಿಗೆ ಮರಳಲಾಗದೆ ಶಾಸಕರು ಹಾಗೂ ಅವರ ತಂಡ ಸದ್ಯ ದುಬೈನ ಮಾಲ್ ಒಂದರಲ್ಲಿ ಸುರಕ್ಷಿತವಾಗಿ ಆಶ್ರಯ ಪಡೆದಿದ್ದಾರೆ. ಸಿರುಗುಪ್ಪ ಹಾಗೂ ಬಳ್ಳಾರಿಯ ಪ್ರವಾಸಿಗರು ಈ ತಂಡದಲ್ಲಿದ್ದಾರೆ ಎಂದು ತಿಳಿದುಬಂದಿದೆ.
ಈ ವಿಷಯ ತಿಳಿಯುತ್ತಿದ್ದಂತೆಯೇ ಮಾಜಿ ಸಚಿವ ಹಾಗೂ ಗ್ರಾಮೀಣ ಶಾಸಕ ಬಿ. ನಾಗೇಂದ್ರ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿದ್ದಾರೆ. ದುಬೈನಲ್ಲಿ ಸಿಲುಕಿರುವ ಎಲ್ಲ 50 ಮಂದಿಯನ್ನು ಸುರಕ್ಷಿತವಾಗಿ ಕರ್ನಾಟಕಕ್ಕೆ ಕರೆತರಲು ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಮುಖ್ಯಮಂತ್ರಿಗಳು, ಎಲ್ಲರನ್ನೂ ಸುರಕ್ಷಿತವಾಗಿ ಕರೆತರುವ ಭರವಸೆ ನೀಡಿದ್ದಾರೆ.



