March 5, 2026
Thursday, March 5, 2026
spot_img

ಮಣಿಪುರದಲ್ಲಿ ಮತ್ತೆ ಆತಂಕ: ಐಇಡಿ ಬಾಂಬ್ ಸ್ಫೋಟ, ಇಬ್ಬರಿಗೆ ಗಾಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಣಿಪುರದ ಬಿಷ್ಣುಪುರ ಜಿಲ್ಲೆಯಯಲ್ಲಿ ಸೋಮವಾರ ಸುಧಾರಿತ ಸ್ಫೋಟಕ ಸಾಧನ (IED) ಸ್ಫೋಟಗೊಂಡು ಇಬ್ಬರು ಗಾಯಗೊಂಡಿದ್ದಾರೆ.

ಜಿಲ್ಲೆಯ ಮೈತೈ ಕುಟುಂಬವೊಂದಕ್ಕೆ ಸೇರಿದ ಮನೆ ಬಳಿ ಈ ಘಟನೆ ನಡೆದಿದೆ. ಮೊದಲ ಸ್ಫೋಟ ಬೆಳಗ್ಗೆ 5ರಿಂದ 6 ಗಂಟೆಯ ನಡುವೆ ಪಾಳುಬಿದ್ದ ಮನೆಯೊಳಗೆ ಸಂಭವಿಸಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಬಿಷ್ಣುಪುರದ ಸೈಟನ್ ಗ್ರಾಮದಲ್ಲಿ ಮನೆಯಿಂದ ಸುಮಾರು 200 ಮೀಟರ್ ದೂರದಲ್ಲಿ ಎರಡನೇ ಸ್ಫೋಟ ಸಂಭವಿಸಿದ್ದು, ಒಬ್ಬ ಪುರುಷ ಮತ್ತು ಮಹಿಳೆ ಗಾಯಗೊಂಡಿದ್ದಾರೆ ಎಂದು ಹೇಳಿದ್ದಾರೆ.

ಒಂದರ ನಂತರ ಒಂದರಂತೆ ಸ್ಫೋಟಗಳು ಸಂಭವಿಸಿದವು ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಎರಡನೇ ಸ್ಫೋಟದಲ್ಲಿ ಗಾಯಗೊಂಡ ಇಬ್ಬರು ವ್ಯಕ್ತಿಗಳನ್ನು ಸೋಯಿಬಮ್ ಸನತೊಂಬ ಸಿಂಗ್ (52) ಮತ್ತು ನೊಂಗ್ಥೊಂಬಮ್ ಇಂದುಬಾಲಾ ದೇವಿ (37) ಎಂದು ಗುರುತಿಸಲಾಗಿದೆ. ಸೈಟನ್ ರಾಜ್ಯ ರಾಜಧಾನಿ ಇಂಫಾಲ್‌ನಿಂದ ಸುಮಾರು 55 ಕಿ.ಮೀ. ದೂರದಲ್ಲಿದೆ. ಚುರಚಂದಪುರ ಮತ್ತು ಬಿಷ್ಣುಪುರ ಅಂತರ ಜಿಲ್ಲಾ ಗಡಿಯಲ್ಲಿ ಬರುತ್ತದೆ. ಗಾಯಗೊಂಡ ಇಬ್ಬರನ್ನು ಬಿಷ್ಣುಪುರ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಯಿತು.

ಈ ಮನೆ 70 ವರ್ಷದ ಸಲಾಂ ಮಣಿ ಸಿಂಗ್ ಎಂಬುವವರಿಗೆ ಸೇರಿದ್ದು, 2023ರಲ್ಲಿ ಮೈತೈ-ಕುಕಿ ಜನಾಂಗೀಯ ದ್ವೇಶ ಪ್ರಾರಂಭವಾದಾಗಿನಿಂದ ಈ ಮನೆಯಲ್ಲಿ ಯಾರೂ ವಾಸಿಸುತ್ತಿಲ್ಲ. ಸಲಾಂ ಮಣಿ ಸಿಂಗ್ ಸದ್ಯ ಪರಿಹಾರ ಶಿಬಿರದಲ್ಲಿ ವಾಸಿಸುತ್ತಿದ್ದಾರೆ.

ಕುಕಿ ಬುಡಕಟ್ಟು ಜನಾಂಗದ ಸದಸ್ಯರು ಐಇಡಿಗಳನ್ನು ಇಟ್ಟಿದ್ದಾರೆ ಎಂದು ಮೈತೈ ಸಮುದಾಯದ ಗ್ರಾಮಸ್ಥರು ಆರೋಪಿಸಿದ್ದಾರೆ. ಪದೇ ಪದೆ ದಾಳಿ ನಡೆದರೂ ಕ್ರಮ ಕೈಗೊಳ್ಳದಿರುವುದನ್ನು ಪ್ರತಿಭಟಿಸಲು ತಾವು ಒಟ್ಟುಗೂಡಿದ್ದೇವೆ. ಕೇಂದ್ರ ಪಡೆಗಳು ತಕ್ಷಣವೇ ಕಾರ್ಯನಿರ್ವಹಿಸುವಂತೆ ಕೇಳಿಕೊಂಡಿದ್ದೇವೆ ಎಂದು ಅವರು ಹೇಳಿದರು.

ಮಣಿಪುರವು ರಾಷ್ಟ್ರಪತಿ ಆಳ್ವಿಕೆಯಲ್ಲಿದೆ. ಇದು 2025ರ ಫೆಬ್ರವರಿಯಲ್ಲಿ ಜಾರಿಗೆ ಬಂದಿತು. ಮೊದಲ ಆರು ತಿಂಗಳು ಮುಗಿದ ನಂತರ ಇದನ್ನು ಆರು ತಿಂಗಳವರೆಗೆ ವಿಸ್ತರಿಸಲಾಯಿತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !