ಹೊಸದಿಗಂತ ಡಿಜಿಟಲ್ ಡೆಸ್ಕ್:
ಫೆಬ್ರವರಿ 14… ಹಲವರಿಗೆ ಪ್ರೇಮದ ದಿನ. ಆದರೆ ಭಾರತದ ಇತಿಹಾಸದಲ್ಲಿ ಈ ದಿನ ಒಂದು ಅಚ್ಚಳಿಯದ ನೋವಿನ ಗುರುತು. 6 ವರ್ಷಗಳ ಹಿಂದೆ ಈ ದಿನ ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಸ್ಫೋಟ ದೇಶದ ಹೃದಯವನ್ನೇ ಚಿದ್ರ ಮಾಡಿತ್ತು. ಕ್ಷಣಾರ್ಧದಲ್ಲಿ 40 ಸಿಆರ್‌ಪಿಎಫ್ ಯೋಧರ ಜೀವಗಳು ಕಳೆದುಹೋಯಿತು. ದೇಶದ ಮನೆಮನೆಗೂ ದುಃಖದ ಸುದ್ದಿ ಮಿಂಚಿನಂತೆ ತಲುಪಿತ್ತು.
ರಜೆ ಮುಗಿಸಿ ಕರ್ತವ್ಯಕ್ಕೆ ಮರಳುತ್ತಿದ್ದ ಯೋಧರು 78 ವಾಹನಗಳಲ್ಲಿ ಜಮ್ಮುವಿನಿಂದ ಶ್ರೀನಗರದತ್ತ ಪ್ರಯಾಣಿಸುತ್ತಿದ್ದರು. ಪ್ರತಿಯೊಬ್ಬರ ಮನಸ್ಸಿನಲ್ಲಿ ಕುಟುಂಬದ ನೆನಪು, ಮಕ್ಕಳ ನಗು, ತಾಯಿಯ ಆಶೀರ್ವಾದಗಳಿತ್ತು. ಆದರೆ ಅವಂತಿಪೋರಾ ಸಮೀಪ ಆತ್ಮಾಹುತಿ ದಾಳಿಕೋರರು ಸ್ಫೋಟಕ ತುಂಬಿದ ಕಾರನ್ನು ಬಸ್‌ಗೆ ಡಿಕ್ಕಿ ಹೊಡೆದ ಕ್ಷಣದಲ್ಲಿ ಎಲ್ಲವೂ ಭಸ್ಮವಾಯಿತು. ಸ್ಫೋಟದ ತೀವ್ರತೆ ಅಷ್ಟೊಂದು ಭಯಾನಕವಾಗಿತ್ತು ಬಸ್ ಗುರುತೇ ಸಿಗದಂತೆ ನಜ್ಜುಗುಜ್ಜಾಗಿತ್ತು.
ಆ ದಾಳಿ ಕೇವಲ 40 ಯೋಧರ ಜೀವಗಳನ್ನು ಮಾತ್ರ ಕಸಿದುಕೊಳ್ಳಲಿಲ್ಲ; ಅನೇಕ ಕುಟುಂಬಗಳ ಕನಸುಗಳನ್ನು, ಮಕ್ಕಳ ಭವಿಷ್ಯವನ್ನು, ತಾಯಂದಿರ ನಂಬಿಕೆಯನ್ನು ಕಿತ್ತುಕೊಂಡಿತು. ದೇಶದಾದ್ಯಂತ ಜನರು ಕಣ್ಣೀರಿಟ್ಟು ಶಹೀದರ ಅಂತಿಮ ಯಾತ್ರೆಗೆ ಗೌರವ ಸಲ್ಲಿಸಿದರು. “ನಮ್ಮ ಮಗ ದೇಶಕ್ಕಾಗಿ ಬಲಿಯಾದ” ಎಂಬ ಹೆಮ್ಮೆಯ ಮಾತುಗಳ ಹಿಂದೆ ದುಃಖದ ಸಾಗರವೇ ಅಡಗಿತ್ತು.
ಇದನ್ನೂ ಓದಿ:
ಈ ದಾಳಿಯಲ್ಲಿ ಜನರ ಮನಸ್ಸಿನಲ್ಲಿ ಆಕ್ರೋಶ ಹುಟ್ಟಿಸಿತು. ಉಗ್ರರ ವಿರುದ್ಧ ಕಠಿಣ ಕ್ರಮಕ್ಕೆ ಭಾರತ ಮುಂದಾಯಿತು. ಕೆಲವೇ ದಿನಗಳಲ್ಲಿ ಬಾಲಾಕೋಟ್‌ನಲ್ಲಿ ನಡೆದ ವೈಮಾನಿಕ ದಾಳಿ ದೇಶದ ಪ್ರತಿಕ್ರಿಯೆಯಾಗಿ ಕಂಡುಬಂದಿತು. ಆದರೆ ಪ್ರತೀಕಾರದ ಕಥೆಯಿಗಿಂತ ದೊಡ್ಡದು ಯೋಧರ ತ್ಯಾಗ.
ಪುಲ್ವಾಮಾ ಇಂದು ಕೇವಲ ಒಂದು ಘಟನೆ ಅಲ್ಲ. ಅದು ದೇಶಭಕ್ತಿಯ ಅರ್ಥವನ್ನು ಮರುಸ್ಥಾಪಿಸಿದ ಕ್ಷಣ. ಪ್ರತಿವರ್ಷ ಈ ದಿನ ಬಂದಾಗ ಹೂವಿನ ಮಳೆಗಿಂತ ಕಣ್ಣೀರಿನ ಹನಿ ಹೆಚ್ಚು ಸುರಿಯುತ್ತದೆ. ಹುತಾತ್ಮರ ನೆನಪು ನಮ್ಮ ಹೃದಯಗಳಲ್ಲಿ ಸದಾಕಾಲ ಜೀವಂತ. ಅವರ ತ್ಯಾಗವೇ ಭಾರತದ ಶಕ್ತಿ.



