ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಬೀದಿ ನಾಯಿಗಳ ಕಾಟ ಹಾಗೂ ಬಿಡಾಡಿ ದನಗಳ ಹಾವಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಇಂದು ಮಹತ್ವದ ಆದೇಶ ನೀಡಿದೆ.
ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ಬಸ್ ನಿಲ್ದಾಣಗಳು, ಕ್ರೀಡಾಂಗಣಗಳು ಹಾಗೂ ರೈಲ್ವೆ ನಿಲ್ದಾಣಗಳಿಂದ ಬೀದಿ ನಾಯಿಗಳನ್ನ ಸ್ಥಳಾಂತರಿಸುವಂತೆ ಸೂಚನೆ ನೀಡಿದೆ. ಜೊತೆಗೆ ಹೆದ್ದಾರಿಗಳನ್ನ ಬಿಡಾಡಿ ದನಗಳಿಂದ ಮುಕ್ತಗೊಳಿಸುವಂತೆಯೂ ತಾಕೀತು ಮಾಡಿದೆ.
ಸ್ವಯಂ ಪ್ರೇರಿತ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ , ಸಂದೀಪ್ ಮೆಹ್ತಾ ಮತ್ತು ಎನ್‌ವಿ ಅಂಜಾರಿಯಾ ಅವರ ಪೀಠವು ಇಂದು ʻರಸ್ತೆಗಳಿಂದ ಬಿಡಾಡಿ ದನಗಳು ಹಾಗೂ ನಾಯಿಗಳನ್ನು ತೆರವುಗೊಳಿಸಬೇಕೆಂಬʼ ರಾಜಸ್ಥಾನ ಹೈಕೋರ್ಟ್ ನಿರ್ದೇಶನಗಳನ್ನ ಪುನರುಚ್ಚರಿಸಿದೆ. ಆ ಆದೇಶವನ್ನು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ವಿಸ್ತರಿಸಲು ಸುಪ್ರೀಂ ಕೋರ್ಟ್ ನಿರ್ಧರಿಸಿದೆ. ಜೊತೆಗೆ ಹೆದ್ದಾರಿಗಳಿಂದ ಪ್ರಾಣಿಗಳ ಸ್ಥಳಾಂತರ ಖಚಿತಪಡಿಸಿಕೊಳ್ಳಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಲೋಕೋಪಯೋಗಿ ಇಲಾಖೆ, ಪುರಸಭೆ ಅಧಿಕಾರಿಗಳು, ರಸ್ತೆ ಮತ್ತು ಸಾರಿಗೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.
ಹೆದ್ದಾರಿಗಳು ಮತ್ತು ಇತರ ಎಕ್ಸ್‌ಪ್ರೆಸ್ ವೇಗಳಲ್ಲಿ ಬಿಡಾಡಿ ದನಗಳು, ನಾಯಿಗಳನ್ನ ಹಿಡಿಯಲು ಹೈವೆ ಪ್ಯಾಟ್ರೋಲ್ ತಂಡ ರಚಿಸಬೇಕು. ಬಿಡಾಡಿ ಪ್ರಾಣಿಗಳ ಬಗ್ಗೆ ದೂರು ನೀಡಲು ಸಹಾಯವಾಣಿ ಸಂಖ್ಯೆ ಆರಂಭಿಸಬೇಕು. ಎಲ್ಲಾ ರಾಜ್ಯಗಳ ಮುಖ್ಯಕಾರ್ಯದರ್ಶಿಗಳು ಈ ನಿರ್ದೇಶನವನ್ನ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಆದೇಶಿಸಿದೆ.
ಬೀದಿ ನಾಯಿಗಳ ಕಾಟ ತಡೆಯಲು ಆಸ್ಪತ್ರೆ, ಶಾಲೆ, ಕಾಲೇಜುಗಳಿಗೆ ಬೇಲಿ ಹಾಕಿ : ಸುಪ್ರೀಂ ಸೂಚನೆ

