ಹೊಸದಿಗಂತ ಡಿಜಿಟಲ್ ಡೆಸ್ಕ್:
ಮರ್ಯಾದಾ ಪುರುಷೋತ್ತಮ ಶ್ರೀರಾಮನ ಜನ್ಮಭೂಮಿ ಅಯೋಧ್ಯೆಯಲ್ಲಿ ಇಂದು ಹಬ್ಬದ ವಾತಾವರಣ ಮನೆಮಾಡಿದೆ. ರಾಮಲಲಾ ವಿಗ್ರಹ ಪ್ರತಿಷ್ಠಾಪನೆಯ ಸವಿನೆನಪಿಗಾಗಿ ‘ಪ್ರಾಣ ಪ್ರತಿಷ್ಠಾ ದ್ವಾದಶಿ’ ವಾರ್ಷಿಕೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.
ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಟ್ರಸ್ಟ್ ಮಾಹಿತಿ ನೀಡಿರುವಂತೆ, ಇಂದು ರಾಮಲಲಾನಿಗೆ ವಿಶೇಷ ಅಭಿಷೇಕ ಹಾಗೂ ಧಾರ್ಮಿಕ ಸ್ನಾನದ ಕಾರ್ಯಕ್ರಮಗಳು ಜರುಗಲಿವೆ. ಸುಮಾರು 4 ಗಂಟೆಗಳ ಕಾಲ ಸುದೀರ್ಘವಾಗಿ ನಡೆಯಲಿರುವ ಈ ಪೂಜಾ ಕೈಂಕರ್ಯಗಳಲ್ಲಿ ವೇದಘೋಷಗಳು ಮೊಳಗಲಿವೆ.

ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಹಲವು ಗಣ್ಯರು ಅಯೋಧ್ಯೆಗೆ ಆಗಮಿಸುತ್ತಿದ್ದಾರೆ.
ಅನ್ನಪೂರ್ಣ ಮಂದಿರದಲ್ಲಿ ರಾಜನಾಥ್ ಸಿಂಗ್ ಅವರು ಕೇಸರಿ ಧ್ವಜವನ್ನು ಹಾರಿಸಲಿದ್ದಾರೆ. ಕಾರ್ಯಕ್ರಮದ ನಂತರ ಮಂದಿರ ಸಂಕೀರ್ಣದ ನಿರ್ಗಮನ ದ್ವಾರವಾದ ‘ಅಂಗದ್ ತಿಲಾ’ದಲ್ಲಿ ಅವರು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಕಳೆದ 2024ರ ಜನವರಿ 22ರಂದು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ರಾಮಲಲಾನ ಪ್ರಾಣ ಪ್ರತಿಷ್ಠಾಪನೆ ನಡೆದಿತ್ತು. ಮೊದಲ ವಾರ್ಷಿಕೋತ್ಸವವನ್ನು 2025ರ ಜನವರಿ 11ರಂದು ಆಚರಿಸಲಾಗಿತ್ತು. ಆದರೆ, ಹಿಂದೂ ಪಂಚಾಂಗದ ಪ್ರಕಾರ ಎರಡನೇ ವರ್ಷದ ತಿಥಿ (ದ್ವಾದಶಿ) ಇಂದು ಅಂದರೆ 2025ರ ಡಿಸೆಂಬರ್ 31ರಂದು ಬಂದಿದೆ.
ಇದರ ಅಂಗವಾಗಿ ಕಳೆದ ಡಿಸೆಂಬರ್ 27ರಿಂದಲೇ ಅಯೋಧ್ಯೆಯಲ್ಲಿ ಯಜ್ಞಗಳು, ರಾಮಚರಿತಮಾನಸ ಪಠಣ, ರಾಮಲೀಲಾ ಪ್ರದರ್ಶನ ಹಾಗೂ ಭಜನಾ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿವೆ.

