ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವಿನ ಮುಖ್ಯಮಂತ್ರಿ ಸ್ಥಾನದ ಪೈಪೋಟಿ ತಾರಕಕ್ಕೇರಿದ್ದು, ಈ ರಾಜಕೀಯ ತಿಕ್ಕಾಟಕ್ಕೆ ಇದೀಗ ಸಮುದಾಯವಾರು, ಮಠಾಧೀಶರು ಮತ್ತು ಪ್ರಬಲ ಸಮುದಾಯಗಳು ಪ್ರವೇಶಿಸಿವೆ.
ಒಕ್ಕಲಿಗ ಸಮುದಾಯದ ಸ್ವಾಮೀಜಿಗಳು ಡಿ.ಕೆ. ಶಿವಕುಮಾರ್ ಅವರಿಗೆ ಬಹಿರಂಗ ಬೆಂಬಲ ವ್ಯಕ್ತಪಡಿಸಿದ್ದರೆ, ಇತ್ತ ಕುರುಬ ಮಠದ ಸ್ವಾಮೀಜಿಗಳು ಸಿದ್ದರಾಮಯ್ಯ ಅವರ ಬೆನ್ನಿಗೆ ನಿಂತಿದ್ದಾರೆ. ಇದರ ನಡುವೆ, ಸಿದ್ದರಾಮಯ್ಯ ಅವರ ಪ್ರಬಲ ಬೆಂಬಲ ನೆಲೆಯಾದ ‘ಅಹಿಂದ’ (ಅಲ್ಪಸಂಖ್ಯಾತರು, ಹಿಂದುಳಿದವರು ಮತ್ತು ದಲಿತರು) ಸಮುದಾಯವು ತನ್ನ ಶಕ್ತಿ ಪ್ರದರ್ಶನಕ್ಕೆ ಸಿದ್ಧತೆ ನಡೆಸಿದ್ದು, ಇದು ಸದ್ಯದ ರಾಜಕೀಯ ಬೆಳವಣಿಗೆಗೆ ಹೊಸ ತಿರುವು ನೀಡುವ ಸಾಧ್ಯತೆ ಇದೆ.
ಅಹಿಂದ ಅಸ್ತ್ರದಿಂದ ಹೈಕಮಾಂಡ್‌ಗೆ ಎಚ್ಚರಿಕೆ
ಸಿದ್ದರಾಮಯ್ಯ ಅವರು ಸಂಕಷ್ಟದಲ್ಲಿದ್ದಾಗಲೆಲ್ಲಾ ಬೆಂಬಲವಾಗಿ ನಿಂತಿರುವ ಅಹಿಂದ ವರ್ಗವು, ಒಂದು ವೇಳೆ ಸಿಎಂ ಸ್ಥಾನಕ್ಕೆ ಧಕ್ಕೆ ಬಂದರೆ ಕಾಂಗ್ರೆಸ್‌ಗೆ ಕೈಕೊಡಬಹುದು ಎಂಬ ಸಂದೇಶವನ್ನು ಹೈಕಮಾಂಡ್‌ಗೆ ರವಾನಿಸಲು ಸಿದ್ಧತೆ ನಡೆಸಿದೆ ಎಂದು ವರದಿಯಾಗಿದೆ.
ಕ್ಷೇತ್ರವಾರು ಅಹಿಂದ ಮತಗಳ ವಿಶ್ಲೇಷಣಾ ವರದಿಯ ಪ್ರಕಾರ, ಈ ಸಮುದಾಯದ ಮತಗಳು ರಾಜ್ಯದ ಚುನಾವಣಾ ಫಲಿತಾಂಶದ ಮೇಲೆ ಬೃಹತ್ ಪ್ರಭಾವ ಬೀರುವ ಸಾಧ್ಯತೆ ಇದೆ.
ಸಚಿವರೊಂದಿಗೆ ಸಿದ್ದರಾಮಯ್ಯ ಸಭೆ
2023ರ ಚುನಾವಣಾ ಗೆಲುವಿನಲ್ಲಿ ಅಹಿಂದ ವರ್ಗದ ಕೊಡುಗೆಯನ್ನು ಮನಗಂಡೇ ಹೈಕಮಾಂಡ್ ಸಿದ್ದರಾಮಯ್ಯ ಅವರನ್ನು ಸಿಎಂ ಆಗಿ ಆಯ್ಕೆ ಮಾಡಿತ್ತು. ಅಂದಿನಿಂದ ಇಂದಿನವರೆಗೂ ಈ ಸಮುದಾಯವು ಮುಖ್ಯಮಂತ್ರಿಯವರ ಬೆಂಬಲಕ್ಕೆ ನಿಂತಿದೆ.
ಇತ್ತೀಚೆಗೆ, ಸಿಎಂ ಕಾವೇರಿ ನಿವಾಸದಲ್ಲಿ ಸತೀಶ್ ಜಾರಕಿಹೊಳಿ, ಡಾ. ಜಿ. ಪರಮೇಶ್ವರ್, ಡಾ. ಹೆಚ್.ಸಿ. ಮಹದೇವಪ್ಪ, ವೆಂಕಟೇಶ್, ರಾಜಣ್ಣ ಮತ್ತು ಕೆ.ಜೆ. ಜಾರ್ಜ್ ಸೇರಿದಂತೆ ಸಿದ್ದರಾಮಯ್ಯ ಅವರ ಆಪ್ತ ಸಚಿವರು ಸಭೆ ನಡೆಸಿದ್ದಾರೆ.
ಈ ಸಭೆಯಲ್ಲಿ, ಯಾವುದೇ ಕಾರಣಕ್ಕೂ ಅಧಿಕಾರ ಬಿಟ್ಟು ಕೊಡಬಾರದು ಎಂದು ಸಚಿವರು ಸಿಎಂಗೆ ಸಲಹೆ ನೀಡಿದ್ದಾರೆ. ಅಲ್ಲದೆ, ಅಹಿಂದ ಅಸ್ತ್ರದ ಮೂಲಕವೇ ಹೈಕಮಾಂಡ್ ಮೇಲೆ ಒತ್ತಡ ಹೇರಿ, “ಅಹಿಂದ ವರ್ಗವನ್ನು ಕಡೆಗಣಿಸಿದರೆ ರಾಜ್ಯದಲ್ಲಿ ಕಾಂಗ್ರೆಸ್‌ಗೆ ಭವಿಷ್ಯವಿಲ್ಲ” ಎಂಬ ಸಂದೇಶವನ್ನು ವರಿಷ್ಠರಿಗೆ ಮನವರಿಕೆ ಮಾಡಿಕೊಡಲು ನಿರ್ಧರಿಸಲಾಗಿದೆ ಎನ್ನಲಾಗಿದೆ.

