ಹೊಸದಿಗಂತ ಡಿಜಿಟಲ್ ಡೆಸ್ಕ್
ಹಾಸನ ಜಿಲ್ಲೆಯ ಕೆ.ಆರ್.ಪುರಂ ಬಡಾವಣೆಯಲ್ಲಿ ಬುಧವಾರ ತಡರಾತ್ರಿ ಭೀಕರ ಕೊಲೆಯೊಂದು ನಡೆದಿದ್ದು, ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಅಡುಗೆ ಗುತ್ತಿಗೆದಾರ ಆನಂದ್ (48) ಎಂಬುವವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಈ ಸಂಬಂಧ ಧರ್ಮೇಂದ್ರ ಎಂಬಾತನ ಮೇಲೆ ಆರೋಪ ಕೇಳಿಬಂದಿದ್ದು, ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಕೊಲೆಯಾದ ಆನಂದ್ ಮತ್ತು ಆರೋಪಿ ಧರ್ಮೇಂದ್ರ ಇಬ್ಬರೂ ಒಂದೇ ಮಹಿಳೆಯ ಜೊತೆ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ಧರ್ಮೇಂದ್ರ ಕಳೆದ ಎಂಟು ವರ್ಷಗಳಿಂದ ಆ ಮಹಿಳೆಯೊಂದಿಗೆ ಸಂಪರ್ಕದಲ್ಲಿದ್ದನು. ಆದರೆ, ಇತ್ತೀಚೆಗೆ ಆನಂದ್ ಕೂಡ ಅದೇ ಮಹಿಳೆಯೊಂದಿಗೆ ಆಪ್ತರಾಗಿದ್ದುದು ಧರ್ಮೇಂದ್ರನ ಕೆಂಗಣ್ಣಿಗೆ ಗುರಿಯಾಗಿತ್ತು. ಇದೇ ವಿಚಾರವಾಗಿ ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು.
ಬುಧವಾರ ರಾತ್ರಿ ಇಬ್ಬರೂ ಬಾರ್ ಒಂದರಲ್ಲಿ ಭೇಟಿಯಾಗಿ ಮದ್ಯಪಾನ ಮಾಡುವಾಗ ಮಹಿಳೆಯ ವಿಚಾರವಾಗಿ ಮಾತಿಗೆ ಮಾತು ಬೆಳೆದಿದೆ. ಅಲ್ಲಿಂದ ಆನಂದ್ ಮನೆಗೆ ತೆರಳಿದ್ದರೂ, ಧರ್ಮೇಂದ್ರ ಫೋನ್ ಮಾಡಿ ಮತ್ತೆ ಅವರನ್ನು ಹೊರಗೆ ಕರೆಸಿಕೊಂಡಿದ್ದಾನೆ. ಕುಡಿದ ಅಮಲಿನಲ್ಲಿದ್ದ ಧರ್ಮೇಂದ್ರ, ಆನಂದ್ ಅವರೊಂದಿಗೆ ಮತ್ತೆ ಗಲಾಟೆ ತೆಗೆದು, ಜೊತೆಯಲ್ಲಿದ್ದ ಚಾಕುವಿನಿಂದ ಐದಾರು ಬಾರಿ ಮನಬಂದಂತೆ ಇರಿದಿದ್ದಾನೆ.
ತೀವ್ರ ರಕ್ತಸ್ರಾವದಿಂದ ಆನಂದ್ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ಕೃತ್ಯ ಎಸಗಿದ ಬಳಿಕ ಧರ್ಮೇಂದ್ರ ಅಲ್ಲಿಂದ ಪರಾರಿಯಾಗಿದ್ದಾನೆ. ಸದ್ಯ ಹಾಸನ ನಗರದ ಕೆ.ಆರ್. ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಯ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.



