ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿನಿಮೀಯ ಶೈಲಿಯಲ್ಲಿ ಚಿನ್ನದ ವ್ಯಾಪಾರಿಯನ್ನು ಅಡ್ಡಗಟ್ಟಿ, ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನ ದೋಚಿದ್ದ ಕೇರಳ ಮೂಲದ ಕುಖ್ಯಾತ ಗ್ಯಾಂಗ್‌ನ್ನು ಚಾಮರಾಜನಗರ ಪೊಲೀಸರು ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಪ್ರಮುಖ ಸೂತ್ರಧಾರನಿಗಾಗಿ ತೀವ್ರ ಶೋಧ ಮುಂದುವರಿದಿದೆ.
ನವೆಂಬರ್ 20ರಂದು ಆಭರಣ ತಯಾರಕ ವಿನು ಮತ್ತು ಚಾಲಕ ಸಮೀರ್ ಅವರು ಮಂಡ್ಯದ ‘ರಾಜೇಶ್ ಜ್ಯುವೆಲರ್ಸ್’ನಿಂದ ಅಂದಾಜು 1.3 ಕೆಜಿಗೂ ಹೆಚ್ಚು (800 ಗ್ರಾಂ 24 ಕ್ಯಾರೆಟ್ ಮತ್ತು 518 ಗ್ರಾಂ 22 ಕ್ಯಾರೆಟ್) ಚಿನ್ನದ ಗಟ್ಟಿಗಳನ್ನು ಖರೀದಿಸಿ ಕೇರಳದತ್ತ ಪ್ರಯಾಣಿಸುತ್ತಿದ್ದರು. ಈ ವಿಷಯ ತಿಳಿದ ದರೋಡೆಕೋರರು ಎರಡು ಇನ್ನೋವಾ ಹಾಗೂ ಒಂದು ಇಟಿಯೋಸ್ ಕಾರಿನಲ್ಲಿ ಇವರನ್ನು ಬೆನ್ನಟ್ಟಿದ್ದಾರೆ.
ಮದ್ದೂರು ಚೆಕ್‌ಪೋಸ್ಟ್‌ನಿಂದಲೇ ವಿನು ಅವರ ಕಾರನ್ನು ಹಿಂಬಾಲಿಸಿಕೊಂಡು ಬಂದ ದರೋಡೆಕೋರರು, ಬಂಡೀಪುರದ ಮೂಲೆಹೊಳೆ ಅರಣ್ಯ ಪ್ರದೇಶವನ್ನು ಗುರಿಯಾಗಿಸಿಕೊಂಡಿದ್ದರು. ಮೊಬೈಲ್ ನೆಟ್‌ವರ್ಕ್ ಸಿಗದ, ನಿರ್ಜನ ಪ್ರದೇಶ ತಲುಪುತ್ತಿದ್ದಂತೆ ವಿನು ಅವರ ಕಾರಿಗೆ ತಮ್ಮ ವಾಹನದಿಂದ ಡಿಕ್ಕಿ ಹೊಡೆದಿದ್ದಾರೆ. ನಂತರ ಕಬ್ಬಿಣದ ರಾಡ್‌ನಿಂದ ವಿನು ಅವರ ಮೇಲೆ ಹಲ್ಲೆ ನಡೆಸಿ, ಸುಮಾರು 1,400 ಗ್ರಾಂ ತೂಕದ ಚಿನ್ನದೊಂದಿಗೆ ಪರಾರಿಯಾಗಿದ್ದರು.
ಘಟನೆ ನಡೆದ ಬೆನ್ನಲ್ಲೇ ಎಚ್ಚೆತ್ತ ಪೊಲೀಸರು ಟೋಲ್ ಪ್ಲಾಜಾಗಳು ಮತ್ತು ಅರಣ್ಯ ಇಲಾಖೆಯ ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ತಪಾಸಣೆ ನಡೆಸಿದ್ದರು. ತಾಂತ್ರಿಕ ಸಾಕ್ಷ್ಯಗಳ ಆಧಾರದ ಮೇಲೆ ಕೇರಳ ಮೂಲದ ಗ್ಯಾಂಗ್ ಈ ಕೃತ್ಯ ಎಸಗಿರುವುದು ದೃಢಪಟ್ಟಿದೆ. ಸದ್ಯ ಮೂವರನ್ನು ವಶಕ್ಕೆ ಪಡೆದಿರುವ ಪೊಲೀಸರು, ಲೂಟಿ ಮಾಡಲಾದ ಚಿನ್ನದ ರಿಕವರಿಗಾಗಿ ಮತ್ತು ತಲೆಮರೆಸಿಕೊಂಡಿರುವ ಇತರ ಆರೋಪಿಗಳ ಪತ್ತೆಗಾಗಿ ತಂಡಗಳನ್ನು ರಚಿಸಿದ್ದಾರೆ.

