ಹೊಸದಿಗಂತ ಡಿಜಿಟಲ್ ಡೆಸ್ಕ್:
ನವದೆಹಲಿ ನಗರದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕೇಂದ್ರ ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆಯ ಉಪ ಕಾರ್ಯದರ್ಶಿ ನವಜೋತ್ ಸಿಂಗ್ (52) ಮೃತಪಟ್ಟಿದ್ದಾರೆ. ಈ ಅಪಘಾತದಲ್ಲಿ ಅವರ ಪತ್ನಿ ಸಂದೀಪ್ ಕೌರ್ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ನವಜೋತ್ ಸಿಂಗ್ ಅವರು ಭಾನುವಾರ ರಾತ್ರಿ ಬಾಂಗ್ಲಾ ಸಾಹಿಬ್ ಗುರುದ್ವಾರದಿಂದ ತಮ್ಮ ಬೈಕ್‌ನಲ್ಲಿ ಮನೆಗೆ ಹಿಂದಿರುಗುತ್ತಿದ್ದರು. ಈ ವೇಳೆ ಬಿಎಂಡಬ್ಲ್ಯೂ ಕಾರೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಅವರು ಗಂಭೀರವಾಗಿ ಗಾಯಗೊಂಡರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ ಮಾರ್ಗಮಧ್ಯದಲ್ಲೇ ಪ್ರಾಣ ಕಳೆದುಕೊಂಡರು.
ಅಪಘಾತದ ನಂತರ ನವಜೋತ್ ಸಿಂಗ್ ಪುತ್ರ ಮಾಧ್ಯಮಗಳ ಮುಂದೆ ಮಾತನಾಡಿ, ಅಂಬುಲೆನ್ಸ್ ಚಾಲಕರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. “ಅಪಘಾತ ಸ್ಥಳದಿಂದ ಹತ್ತಿರದ ಆಸ್ಪತ್ರೆಗೆ ತೆಗೆದುಕೊಂಡು ಹೋಗಬೇಕಾಗಿದ್ದರೂ, 17 ಕಿಲೋಮೀಟರ್ ದೂರದಲ್ಲಿರುವ ಜಿಟಿಬಿ ನಗರದ ನುಲೈಫ್ ಆಸ್ಪತ್ರೆಗೆ ಕರೆದೊಯ್ದರು. ಇದರಿಂದಲೇ ತಂದೆಯ ಪ್ರಾಣ ಉಳಿಯಲಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನಾ ಸ್ಥಳದಲ್ಲಿ ಪೊಲೀಸರು ನಡೆಸಿದ ಪ್ರಾಥಮಿಕ ತನಿಖೆಯಲ್ಲಿ, ಬಿಎಂಡಬ್ಲ್ಯೂ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು ರಸ್ತೆ ಪಕ್ಕದಲ್ಲಿ ನಿಂತಿರುವುದಾಗಿ ತಿಳಿದುಬಂದಿದೆ. ಕಾರನ್ನು ಗಗನ್ ಪ್ರೀತ್ ಹೆಸರಿನ ಮಹಿಳೆ ಚಾಲನೆ ಮಾಡುತ್ತಿದ್ದರೆಂದು ಪ್ರತ್ಯಕ್ಷದರ್ಶಿಗಳು ಹೇಳಿಕೆ ನೀಡಿದ್ದಾರೆ.