ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣವು ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಪ್ರಕರಣದ ಪ್ರಮುಖ ಆರೋಪಿ ನಟ ದರ್ಶನ್ ಸುತ್ತಲಿನ ಸಂಕಷ್ಟ ಮತ್ತಷ್ಟು ಗಟ್ಟಿಯಾಗುತ್ತಿದೆ. ಈಗಾಗಲೇ ಪರಪ್ಪನ ಅಗ್ರಹಾರ ಜೈಲು ಸೇರಿರುವ ದರ್ಶನ್‌ಗೆ, ಹಣಕಾಸಿನ ಅಕ್ರಮ ವಿಚಾರವೂ ದೊಡ್ಡ ಬಿಕ್ಕಟ್ಟಾಗಿ ಪರಿಣಮಿಸಿದೆ. ಮನೆ ಶೋಧನೆ ವೇಳೆ ಪತ್ತೆಯಾದ ಲಕ್ಷಾಂತರ ರೂಪಾಯಿ ನಗದು ಹಣದ ಮೂಲವೇ ಈಗ ತನಿಖೆಯ ಕೇಂದ್ರಬಿಂದುವಾಗಿದೆ.
82 ಲಕ್ಷ ರೂಪಾಯಿ ಹಣದ ಮೂಲ ಕುರಿತು ಆದಾಯ ತೆರಿಗೆ ಇಲಾಖೆ ತನಿಖೆ ನಡೆಸುತ್ತಿರುವ ನಡುವೆಯೇ, ದರ್ಶನ್‌ಗೆ ಅತ್ಯಾಪ್ತ ಎನ್ನಲಾಗುವ ಪ್ರದೋಷ್ ನೀಡಿರುವ ಹೇಳಿಕೆ ತನಿಖೆಗೆ ಹೊಸ ಗೊಂದಲ ಸೃಷ್ಟಿಸಿದೆ.
ತನ್ನ ಮನೆಯಲ್ಲೇ ಸಿಕ್ಕ 30 ಲಕ್ಷ ರೂಪಾಯಿ ನಗದು ಹಣಕ್ಕೆ ಸ್ಪಷ್ಟ ಮೂಲ ಹೇಳಲು ಪ್ರದೋಷ್ ವಿಫಲರಾಗಿದ್ದಾರೆ. ಈ ಹಣ ತನ್ನದೂ ಅಲ್ಲ, ಕುಟುಂಬದವರದ್ದೂ ಅಲ್ಲ ಎಂದು ಐಟಿ ಅಧಿಕಾರಿಗಳ ಮುಂದೆ ಅವರು ಹೇಳಿದ್ದಾರೆ. ಆದರೆ, ಹಣ ಎಲ್ಲಿಂದ ಬಂತು ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡದಿರುವುದು ಅಧಿಕಾರಿಗಳ ಸಂಶಯವನ್ನು ಹೆಚ್ಚಿಸಿದೆ.
ಈ ಬೆಳವಣಿಗೆಯ ಬೆನ್ನಲ್ಲೇ, ದರ್ಶನ್ ಹಾಗೂ ಅವರ ಆಪ್ತರ ಪಾತ್ರವನ್ನು ಇನ್ನಷ್ಟು ಆಳವಾಗಿ ಪರಿಶೀಲಿಸಲು ಆದಾಯ ತೆರಿಗೆ ಇಲಾಖೆ ಮುಂದಾಗಿದೆ. ಇದಕ್ಕೂ ಮೊದಲು ದರ್ಶನ್ ತಮ್ಮ ಬಳಿ ಪತ್ತೆಯಾದ ಹಣ ಕೃಷಿ ಲಾಭ, ಪ್ರಾಣಿಗಳ ಮಾರಾಟ ಹಾಗೂ ಅಭಿಮಾನಿಗಳ ಉಡುಗೊರೆ ಎಂದೇ ಐಟಿ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಆದರೆ, ಯಾವುದೇ ದಾಖಲೆಗಳಿಲ್ಲ ಎಂಬ ಒಪ್ಪಿಗೆಯೇ ಇದೀಗ ಪ್ರಕರಣವನ್ನು ಮತ್ತಷ್ಟು ಗಂಭೀರವಾಗಿಸಿದೆ.
ಕೊಲೆ ಪ್ರಕರಣದ ಜೊತೆಗೆ ಹಣಕಾಸಿನ ವಿಚಾರವೂ ಜೋಡಿಕೆಯಾಗಿರುವುದರಿಂದ, ದರ್ಶನ್ ಎದುರಿಸುತ್ತಿರುವ ಕಾನೂನು ಸವಾಲುಗಳು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

