ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದಲ್ಲೆಡೆ ರಂಜಾನ್ ಹಬ್ಬ ಶುರುವಾಗಿದ್ದು, ಈ ಕ್ಷಣ ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.
ರಂಜಾನ್ ಸಮಯದಲ್ಲಿ ಭಯೋತ್ಪಾದಕರಿಗೆ ಹಣಕಾಸು ಒದಗಿಸುವುದನ್ನು ತಡೆಯುವ ಸಲುವಾಗಿ ಈ ಬಾರಿ ಅನಧಿಕೃತ ರಂಜಾನ್ ದೇಣಿಗೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ.
ಈ ಕುರಿತು ಕಿಶ್ತ್ವಾರ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಪಂಕಜ್ ಕುಮಾರ್ ಶರ್ಮಾ ಎಚ್ಚರಿಕೆ ನೀಡಿದ್ದು, ಅನುಮತಿ ಇಲ್ಲದೆ ಮನೆಮನೆಗೆ ಹೋಗಿ ಅಭಿಯಾನ ನಡೆಸುವುದು, ಸಾರ್ವಜನಿಕರಿಂದ ಹಣ ಸಂಗ್ರಹಿಸುವುದು ಅಥವಾ ಡಿಜಿಟಲ್ ನಿಧಿ ಸಂಗ್ರಹಣಾ ಕಾರ್ಯಕ್ರಮಗಳನ್ನು ನಡೆಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ಗುಪ್ತಚರ ಸಂಸ್ಥೆಗಳು ರಂಜಾನ್ ಮಾಸದ ಅವಧಿಯಿಡೀ ಹೈ ಅಲರ್ಟ್‌ನಲ್ಲಿರುವಂತೆ ಬಹು-ಪದರ ಮೇಲ್ವಿಚಾರಣಾ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಧಾರ್ಮಿಕ ದಾನವನ್ನು ದುರ್ಬಳಕೆ ಮಾಡಿಕೊಳ್ಳುವ ಅಕ್ರಮ ಹಣಕಾಸು ಜಾಲಗಳನ್ನು ತಡೆಗಟ್ಟಲು ಸೂಕ್ಷ್ಮ ಪ್ರದೇಶಗಳ ಮೇಲೆ ವಿಶೇಷ ನಿಗಾ ಇಡಲಾಗಿದೆ.
ಆದರೆ ನಿಜವಾದ ದಾನಧರ್ಮ ಚಟುವಟಿಕೆಗಳಿಗೆ ಯಾವುದೇ ನಿರ್ಬಂಧಿಸುವುದಲ್ಲ. ಬದಲಾಗಿ, ರಂಜಾನ್‌ನ ಪವಿತ್ರತೆಯನ್ನು ಕಾಪಾಡುವುದು ಹಾಗೂ ಸಾರ್ವಜನಿಕ ಕೊಡುಗೆಗಳು ಅರ್ಹ ಫಲಾನುಭವಿಗಳನ್ನು ತಲುಪುವುದನ್ನು ಖಚಿತಪಡಿಸಿಕೊಳ್ಳುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ.
ಮಾರ್ಗಸೂಚಿಗಳ ಪ್ರಕಾರ, ರಂಜಾನ್ ಅವಧಿಯಲ್ಲಿ ದೇಣಿಗೆಗಳನ್ನು ಸಂಗ್ರಹಿಸಲು ಉದ್ದೇಶಿಸುವ ವ್ಯಕ್ತಿಗಳು, ಮಸೀದಿ ಸಮಿತಿಗಳು, ಟ್ರಸ್ಟ್‌ಗಳು, ಸರಕಾರೇತರ ಸಂಸ್ಥೆಗಳು (ಎನ್‌ಜಿಒಗಳು) ಅಥವಾ ಇತರ ಯಾವುದೇ ಸಂಘಟನೆಗಳು ನಿಗದಿತ ಕ್ರಮಗಳನ್ನು ಪಾಲಿಸಬೇಕು ಮತ್ತು ಅಗತ್ಯವಿರುವ ಸಂದರ್ಭಗಳಲ್ಲಿ ಸಂಬಂಧಿತ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆಯಬೇಕು. ಅನಧಿಕೃತ ನಿಧಿ ಸಂಗ್ರಹಣಾ ಅಭಿಯಾನಗಳನ್ನು ತಡೆಯಲು, ಸರಿಯಾದ ಗುರುತಿನ ಮಾಹಿತಿ, ದಾಖಲೆಪತ್ರಗಳು ಮತ್ತು ದೇಣಿಗೆ ಸಂಗ್ರಹಿಸುವ ಉದ್ದೇಶವನ್ನು ಕಡ್ಡಾಯಗೊಳಿಸಲಾಗಿದೆ. ಆಡಳಿತವು, ಎಲ್ಲಾ ದೇಣಿಗೆಗಳನ್ನು ಸರಿಯಾಗಿ ಲೆಕ್ಕಪತ್ರಗಳಲ್ಲಿ ದಾಖಲಿಸಿ, ಘೋಷಿಸಲಾದ ದಾನಧರ್ಮ ಅಥವಾ ಧಾರ್ಮಿಕ ಉದ್ದೇಶಗಳಿಗಷ್ಟೇ ಕಟ್ಟುನಿಟ್ಟಾಗಿ ಬಳಸಬೇಕು ಎಂದು ತಿಳಿಸಿದೆ.
ಯಾವುದೇ ಸಂಶಯಾಸ್ಪದ ಅಥವಾ ಅನಧಿಕೃತ ಸಂಗ್ರಹಣಾ ಚಟುವಟಿಕೆ ಕಂಡುಬಂದಲ್ಲಿ ಸಮೀಪದ ಪೊಲೀಸ್ ಠಾಣೆ ಅಥವಾ ಜಿಲ್ಲಾ ಆಡಳಿತಕ್ಕೆ ಮಾಹಿತಿ ನೀಡಬೇಕು ಎಂದು ಮನವಿ ಮಾಡಲಾಗಿದೆ.



