March 14, 2026
Saturday, March 14, 2026
spot_img

ನೀರನ್ನು ಪೋಲು ಮಾಡಿದರೆ ಬೀಳುತ್ತೆ ದಂಡ: ಬೆಂಗಳೂರಿಗರ ಮೇಲೆ ‘ಬ್ಲೂ ಫೋರ್ಸ್’ ಕಣ್ಣು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದಲ್ಲಿ ಬೇಸಿಗೆಯ ಕಾವು ಈಗಲೇ ಶುರುವಾಗಿದ್ದು, ರಾಜಧಾನಿಯ ಜನತೆಗೆ ನೀರಿನ ಬಿಸಿ ತಟ್ಟದಂತೆ ಬೆಂಗಳೂರು ಜಲಮಂಡಳಿ ಭರ್ಜರಿ ತಯಾರಿ ನಡೆಸಿದೆ. ಮಾರ್ಚ್‌ನಿಂದ ಆರಂಭವಾಗುವ ಸುಡು ಬೇಸಿಗೆಯಲ್ಲಿ ಕುಡಿಯುವ ನೀರಿನ ಅಭಾವ ತಲೆದೋರದಂತೆ ತಡೆಯಲು ಜಲಮಂಡಳಿ ಈಗಾಗಲೇ ಸಮರಾದೋಪಾದಿಯಲ್ಲಿ ಕಾರ್ಯಪ್ರವೃತ್ತವಾಗಿದೆ.

ಪ್ರಸ್ತುತ ಕೃಷ್ಣರಾಜ ಸಾಗರ ಅಣೆಕಟ್ಟಿನಲ್ಲಿ ಸುಮಾರು 54 ಟಿಎಂಸಿ ನೀರು ಸಂಗ್ರಹವಿದೆ. ಬೆಂಗಳೂರಿನ ಜುಲೈ ತಿಂಗಳವರೆಗಿನ ಅಗತ್ಯಕ್ಕೆ ಕೇವಲ 14 ಟಿಎಂಸಿ ನೀರು ಸಾಕಾಗುವುದರಿಂದ, ಕಾವೇರಿ ನೀರಿನ ಪೂರೈಕೆಯಲ್ಲಿ ಸದ್ಯಕ್ಕೆ ಯಾವುದೇ ಅಡೆತಡೆ ಉಂಟಾಗುವುದಿಲ್ಲ ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ.

ಕಾವೇರಿ ನೀರಿನ ಜೊತೆಗೆ ನಗರದ ಬಹುತೇಕ ಭಾಗಗಳು ಬೋರ್‌ವೆಲ್‌ಗಳನ್ನೇ ಅವಲಂಬಿಸಿವೆ. ಬೇಸಿಗೆಯಲ್ಲಿ ಅಂತರ್ಜಲ ಕುಸಿತ ಸಾಮಾನ್ಯವಾದ್ದರಿಂದ, ಬೋರ್‌ವೆಲ್‌ಗಳ ನಿರ್ವಹಣೆಯನ್ನು ಜಲಮಂಡಳಿ ತನ್ನ ಸುಪರ್ದಿಗೆ ಪಡೆದಿದೆ. ನೀರು ಕಡಿಮೆಯಾಗುವ ಪ್ರದೇಶಗಳನ್ನು ಗುರುತಿಸಿ, ಅಲ್ಲಿಗೆ ತಕ್ಷಣವೇ ಟ್ಯಾಂಕರ್ ಮೂಲಕ ನೀರು ಪೂರೈಸಲು ಅಧಿಕಾರಿಗಳ ತಂಡ ರೂಪುರೇಷೆ ಸಿದ್ಧಪಡಿಸಿದೆ.

ನೀರು ಅಮೂಲ್ಯ ಎಂಬ ಎಚ್ಚರಿಕೆ ನೀಡಲು ಜಲಮಂಡಳಿ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.

ಕಾವೇರಿ ನೀರಿನಲ್ಲಿ ವಾಹನ ತೊಳೆಯುವುದು ಅಥವಾ ಬೇಕಾಬಿಟ್ಟಿ ನೀರು ವ್ಯರ್ಥ ಮಾಡಿದರೆ ಭಾರಿ ದಂಡ ತೆರಬೇಕಾಗುತ್ತದೆ.

ನೀರಿನ ಪೋಲನ್ನು ತಡೆಯಲು ವಿಶೇಷ ವೀಕ್ಷಕರು ಮತ್ತು ‘ಬ್ಲೂ ಫೋರ್ಸ್’ ಸಿಬ್ಬಂದಿ ಕಾರ್ಯಾಚರಣೆ ನಡೆಸಲಿದ್ದಾರೆ.

“ನಮ್ಮ ಬಳಿ ಸಾಕಷ್ಟು ನೀರಿದ್ದರೂ, ಸಾರ್ವಜನಿಕರು ಜೀವಜಲವನ್ನು ಉಳಿತಾಯ ಮಾಡುವುದು ಮುಖ್ಯ. ನೀರಿನ ಪೋಲು ತಡೆದರೆ ದಂಡದ ಭೀತಿ ಇರುವುದಿಲ್ಲ ಮತ್ತು ನಗರದಲ್ಲಿ ಜಲಕ್ಷಾಮವೂ ಎದುರಾಗುವುದಿಲ್ಲ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !