ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಗೋವಾದಲ್ಲಿ ನಡೆದ 56ನೇ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಚಾವುಂಡಿ ದೈವವನ್ನು ದೆವ್ವ ಎಂದು ಕರೆದು ವಿವಾದ ಎಬ್ಬಿಸಿದ್ದ ಬಾಲಿವುಡ್ ನಟ ರಣವೀರ್ ಸಿಂಗ್ ಬಳಿಕ ಕ್ಷಮೆಯನ್ನೂ ಕೋರಿದ್ದಾರೆ.
ಆದರೆ ಇದೀಗ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಹೌದು, ರಣವೀರ್ ಸಿಂಗ್ ವಿರುದ್ಧ ಬೆಂಗಳೂರಿನ ಹೈಗ್ರೌಂಡ್ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ ಎಂದು ವರದಿಯೊಂದು ತಿಳಿಸಿದೆ.
ಗೋವಾ ಫಿಲ್ಮ್ ಫೆಸ್ಟಿವಲ್‌ನಲ್ಲಿ ಸ್ಯಾಂಡಲ್‌ವುಡ್‌ನ ನಟ ರಿಷಬ್ ಶೆಟ್ಟಿ ಕೂಡ ಭಾಗವಹಿಸಿದ್ದರು. ಅವರ ʼಕಾಂತಾರ ಚಾಪ್ಟರ್ 1′ ಚಿತ್ರವನ್ನು ಹೊಗಳುವ ಭರದಲ್ಲಿ ರಣವೀರ್ ಸಿಂಗ್ ವೇದಿಕೆಯಲ್ಲಿ ತುಳುನಾಡ ದೈವವನ್ನು ದೆವ್ವ ಎಂದು ಕರೆದು ಎಡವಟ್ಟು ಮಾಡಿಕೊಂಡಿದ್ದರು. ಜತೆಗೆ ರಿಷಬ್ ಶೆಟ್ಟಿ ಬೇಡ ಎನ್ನುವ ಸೂಚನೆ ನೀಡುತ್ತಿದ್ದರೂ ದೈವವನ್ನು ಅನುಕರಿಸಲು ಹೋಗಿ ಸಾಕಷ್ಟು ಟೀಕೆಗೆ ಗುರಿಯಾಗಿದ್ದರು.
ರಣವೀರ್ ಸಿಂಗ್ ಅವರ ಈ ನಡೆ ಸಾಕಷ್ಟು ಚರ್ಚೆ ಹುಟ್ಟು ಹಾಕಿತ್ತು. ಹಲವರು ಅಕ್ರೋಶ ವ್ಯಕ್ತಪಡಿಸಿದ್ದರು. ಕೊನೆಗೂ ತಮ್ಮ ತಪ್ಪಿನ ಅರಿವಾಗಿ ರಣವೀರ್ ಕ್ಷಮೆಯನ್ನೂ ಕೋರಿದ್ದರು.
ಇನ್‌ಸ್ಟಾಗ್ರಾಮ್‌ನಲ್ಲಿ ಸ್ಟೋರಿ ಹಂಚಿಕೊಂಡ ರಣವೀರ್ ಸಿಂಗ್, “ಕಾಂತಾರ ಚಾಪ್ಟರ್ 1′ ಚಿತರ್ರದಲ್ಲಿನ ರಿಷಬ್ ಅವರ ಅದ್ಭುತ ಅಭಿನಯವನ್ನು ಎತ್ತಿ ತೋರಿಸುವುದು ನನ್ನ ಉದ್ದೇಶವಾಗಿತ್ತು. ಆ ನಿರ್ದಿಷ್ಟ ದೃಶ್ಯವನ್ನು ಅವರು ಮಾಡಿದ ರೀತಿಯಲ್ಲಿ ನಿರ್ವಹಿಸುವುದು ಎಷ್ಟು ಕಷ್ಟ ಎಂದು ನನಗೆ ತಿಳಿದಿದೆ. ಅದಕ್ಕಾಗಿ ನಾನು ಅವರು ಮೆಚ್ಚಿಕೊಂಡಿದ್ದೇನೆ. ನಮ್ಮ ದೇಶದ ಪ್ರತಿಯೊಂದು ಸಂಸ್ಕೃತಿ, ಸಂಪ್ರದಾಯ ಮತ್ತು ನಂಬಿಕೆಯನ್ನು ನಾನು ಯಾವಾಗಲೂ ಆಳವಾಗಿ ಗೌರವಿಸುತ್ತೇನೆ. ನಾನು ಯಾರ ಭಾವನೆಗಳಿಗೆ ನೋವುಂಟು ಮಾಡಿದ್ದರೆ, ನಾನು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ” ಎಂದು ರಣವೀರ್ ಸಿಂಗ್ ಹೇಳಿದ್ದರು.
.‘ಧುರಂಧರ್’ ಚಿತ್ರದ ಬಿಡುಗಡೆಗೆ ದಿನಗಣನೆ
ಸದ್ಯ ರಣವೀರ್ ಸಿಂಗ್ ನಟನೆಯ ಬಾಲಿವುಡ್ ಚಿತ್ರ ‘ಧುರಂಧರ್’ ಬಿಡುಗಡೆಗೆ ಸಜ್ಜಾಗಿದೆ. ರ‘ಧರುಂಧರ್’ ಸಿನಿಮಾ ಡಿಸೆಂಬರ್ 5ರಂದು ತೆರೆಗೆ ಬರಲಿದೆ. ಸದ್ಯ ರಣವೀರ್ ಸಿಂಗ್ ಅವರ ದೈವದ ಕುರಿತಾದ ಹೇಳಿಕೆ ಈ ಚಿತ್ರದ ಕಲೆಕ್ಷನ್ ಮೇಲೆ ಕೆಟ್ಟ ಪರಿಣಾಮ ಬೀರಬಹುದು ಎನ್ನುವ ಆತಂಕ ನಿರ್ಮಾಪಕರಿಗೆ ಎದುರಾಗಿದೆ.

