January14, 2026
Wednesday, January 14, 2026
spot_img

ಆಧಾರ್ ಕಾರ್ಡ್ ನೆಪದಲ್ಲಿ ಲಕ್ಷಾಂತರ ವಸೂಲಿ! ಐವರು ಅಧಿಕಾರಿಗಳ ವಿರುದ್ಧ FIR ದಾಖಲು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರು ದಕ್ಷಿಣ ಜಿಲ್ಲೆಯ ಕನಕಪುರದ ಜ್ಯೂಸ್ ಮತ್ತು ಜೆರಾಕ್ಸ್ ಅಂಗಡಿ ಮಾಲೀಕರೊಬ್ಬರನ್ನು ನಕಲಿ ಆಧಾರ್‌ ಕಾರ್ಡ್ ತಯಾರಿಸುತ್ತಿರುವಂತೆ ಬಿಂಬಿಸಿ ಬೆದರಿಸಿ, ಪೊಲೀಸ್ ಅಧಿಕಾರಿಯೊಬ್ಬರು 1.6 ಲಕ್ಷ ದೋಚಿದ್ದಾರೆಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಸಂಬಂಧ ಪಿಎಸ್‌ಐ ಮತ್ತು ನಾಲ್ವರು ಪೊಲೀಸ್ ಸಿಬ್ಬಂದಿಯ ವಿರುದ್ಧ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ.

ಘಟನೆ ವಿವರ:

ಅಕ್ಟೋಬರ್ 29ರಂದು ಕನಕಪುರದ ಅಂಗಡಿ ಮಾಲೀಕ ರಾಜೇಶ್ ಅವರನ್ನು ಚನ್ನಪಟ್ಟಣ ಪೊಲೀಸ್ ಠಾಣೆಗೆ ಕರೆಸಿಕೊಂಡ ಪಿಎಸ್‌ಐ ಹರೀಶ್ ಅವರು, ನಕಲಿ ಆಧಾರ್‌ ಕಾರ್ಡ್‌ಗಳನ್ನು ಸಿದ್ಧಪಡಿಸುತ್ತಿರುವ ಕುರಿತು ಬೆದರಿಸಿದ್ದಾರೆ. ಇದರ ನಂತರ, ಪಿಎಸ್‌ಐ ಹರೀಶ್ ಮತ್ತು ಸಹಾಯಕ ಸಿಬ್ಬಂದಿಗಳಾದ ವರದರಾಜು, ಸುಭಾಶ್ ಹಾಗೂ ಇನ್ನಿಬ್ಬರು ಸೇರಿ ರಾಜೇಶ್ ಅವರಿಂದ 1.6 ಲಕ್ಷ ಹಣವನ್ನು ವಸೂಲಿ ಮಾಡಿದ್ದಾರೆಂದು ಆರೋಪಿಸಲಾಗಿದೆ.

ಅಧಿಕಾರಿಗಳು ಚನ್ನಪಟ್ಟಣದ ಎರಡು ಪೆಟ್ರೋಲ್ ಬಂಕ್‌ಗಳಲ್ಲಿ ಮೊದಲು ಸ್ಕ್ಯಾನ್ ಮೂಲಕ 60,000 ಮತ್ತು ನಂತರ 1 ಲಕ್ಷ ನಗದನ್ನು ವಸೂಲಿ ಮಾಡಿದ್ದಾರೆ. ಗಮನಾರ್ಹವಾಗಿ, ಎಫ್‌ಐಆರ್ ದಾಖಲಿಸದೆ ರಾಜೇಶ್‌ನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ.

ಈ ದರೋಡೆ ಘಟನೆಯ ಹಿನ್ನೆಲೆಯಲ್ಲಿ ಅಂಗಡಿ ಮಾಲೀಕ ರಾಜೇಶ್ ಅವರು ಕೇಂದ್ರ ವಲಯ ಐಜಿಪಿ ಅವರಿಗೆ ದೂರು ಸಲ್ಲಿಸಿದ್ದರು. ಸದ್ಯ, ಆರೋಪಿತ ಪಿಎಸ್‌ಐ ಹರೀಶ್ ಮತ್ತು ನಾಲ್ಕು ಸಿಬ್ಬಂದಿಗಳು ಕಗ್ಗಲಿಪುರ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿದ್ದಾರೆ. ಸೆನ್ ಠಾಣೆಯ ಡಿವೈಎಸ್‌ಪಿ ಕೆಂಚೇಗೌಡ ಅವರ ನೇತೃತ್ವದಲ್ಲಿ ಈ ಪ್ರಕರಣದ ಸಮಗ್ರ ತನಿಖೆ ನಡೆಯುತ್ತಿದೆ. ಸಾರ್ವಜನಿಕರ ರಕ್ಷಣೆ ಮಾಡಬೇಕಾದ ಪೊಲೀಸರೇ ಈ ಕೃತ್ಯದಲ್ಲಿ ಭಾಗಿಯಾಗಿರುವುದು ಗಂಭೀರ ಸ್ವರೂಪ ಪಡೆದುಕೊಂಡಿದೆ.

Most Read

error: Content is protected !!