ಹೊಸದಿಗಂತ ಡಿಜಿಟಲ್ ಡೆಸ್ಕ್:
ನಗರದ ಬೈಕಂಪಾಡಿ ಕೈಗಾರಿಕಾ ವಲಯದಲ್ಲಿ ಭಾರೀ ಬೆಂಕಿ ಅವಘಡ ಸಂಭವಿಸಿದ್ದು, ಅಮೆಜಾನ್ ಸುಗಂಧದ್ರವ್ಯ ತಯಾರಿಕಾ ಘಟಕ ಬೆಂಕಿಗಾಹುತಿಯಾಗಿದೆ. ಘಟಕದ ಒಳಗಿರುವ ಸುಗಂಧದ್ರವ್ಯ ಸಾಮಗ್ರಿಗಳಿಗೆ ಬೆಂಕಿ ತಗುಲಿದ ಪರಿಣಾಮ ಕ್ಷಣಾರ್ಧದಲ್ಲಿ ಸಂಪೂರ್ಣ ಕಾರ್ಖಾನೆ ಧಗಧಗನೆ ಉರಿದು ಸುತ್ತು ಕರಕಲಾಗಿರುವುದಾಗಿ ತಿಳಿದುಬಂದಿದೆ.
ಅಪಘಾತದ ತೀವ್ರತೆಯಿಂದಾಗಿ ಕೈಗಾರಿಕಾ ವಲಯದೊಳಗೆ ಭೀತಿಯ ವಾತಾವರಣ ನಿರ್ಮಾಣವಾಗಿತ್ತು. ಬೆಂಕಿ ನಂದಿಸಲು ಎಂಸಿಎಫ್, ಎನ್‌ಎಂಪಿಎ ಹಾಗೂ ಕದ್ರಿ ಅಗ್ನಿಶಾಮಕ ದಳದ ವಾಹನಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಲು ಶ್ರಮಿಸುತ್ತಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಿಯಂತ್ರಿಸಲು ಹರಸಾಹಸ ಪಡುತ್ತಿದ್ದು, ಸುತ್ತಮುತ್ತಲಿನ ಘಟಕಗಳಿಗೆ ಬೆಂಕಿ ಹರಡದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದಾರೆ.
ಘಟನೆಯಲ್ಲಿ ಅಪಾರ ಪ್ರಮಾಣದ ಆಸ್ತಿ ನಷ್ಟ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ವರದಿಯಾಗಿಲ್ಲ. ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಗ್ನಿ ಅವಘಡದ ನಿಖರ ಕಾರಣ ಪತ್ತೆಹಚ್ಚಲು ತನಿಖೆ ಆರಂಭಿಸಲಾಗಿದೆ.
ಈ ಅವಘಡದಿಂದಾಗಿ ಸ್ಥಳೀಯ ವ್ಯಾಪಾರ ವಲಯಕ್ಕೂ ಹೊಡೆತ ಬಿದ್ದಿದ್ದು, ಕೈಗಾರಿಕಾ ಪ್ರದೇಶದಲ್ಲಿ ಭದ್ರತಾ ಕ್ರಮಗಳ ಕೊರತೆಯ ಕುರಿತು ಪ್ರಶ್ನೆಗಳು ಉದ್ಭವಿಸಿವೆ. ಅಗ್ನಿ ಅವಘಡಗಳಂತಹ ಘಟನೆಗಳು ಕೈಗಾರಿಕಾ ವಲಯಗಳಲ್ಲಿ ಕಟ್ಟುನಿಟ್ಟಿನ ಸುರಕ್ಷತಾ ಕ್ರಮಗಳ ಅಗತ್ಯವನ್ನು ಮತ್ತೊಮ್ಮೆ ನೆನಪಿಸುತ್ತವೆ.