April 12, 2026
Sunday, April 12, 2026
spot_img

ಧಾರವಾಡದ ಹೊಸಯಲ್ಲಾಪುರ ಕಸದ ಗುಡ್ಡಕ್ಕೆ ಬೆಂಕಿ; ‘ವಿದ್ಯಾಕಾಶಿ’ಯಲ್ಲಿ ವಿಷಗಾಳಿಯ ಅಬ್ಬರ!

ಹೊಸದಿಗಂತ ವರದಿ ಧಾರವಾಡ:

ನಗರದ ಹೊಸಯಲ್ಲಾಪುರ ಭಾಗದಲ್ಲಿರುವ ಬೃಹತ್ ತ್ಯಾಜ್ಯದ ಗುಡ್ಡಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ಇದರಿಂದ ಹೊರಹೊಮ್ಮುತ್ತಿರುವ ದಟ್ಟವಾದ ವಿಷಕಾರಿ ಹೊಗೆ ಇಡೀ ವಿದ್ಯಾಕಾಶಿಯನ್ನು ಆವರಿಸಿದೆ. ಕ್ಷಣಕ್ಷಣಕ್ಕೂ ಬೆಂಕಿಯ ಜ್ವಾಲೆ ತೀವ್ರಗೊಂಡಿದ್ದು, ಸುತ್ತಮುತ್ತಲಿನ ನಿವಾಸಿಗಳು ಮತ್ತು ವಾಹನ ಸವಾರರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.

ಉಸಿರುಗಟ್ಟಿಸುವ ವಾತಾವರಣ
ತ್ಯಾಜ್ಯದ ಗುಡ್ಡದಲ್ಲಿ ಪ್ಲಾಸ್ಟಿಕ್ ಹಾಗೂ ರಬ್ಬರ್ ಮುಂತಾದ ವಸ್ತುಗಳು ಅಧಿಕವಾಗಿರುವುದರಿಂದ, ಬೆಂಕಿಯ ಪರಿಣಾಮವಾಗಿ ಹೊರಬರುತ್ತಿರುವ ಕಪ್ಪು ಹೊಗೆಯು ನಗರದ ಹವಾಮಾನವನ್ನು ಹದಗೆಡಿಸಿದೆ. ವೃದ್ಧರು ಮತ್ತು ಮಕ್ಕಳು ಉಸಿರಾಟದ ಸಮಸ್ಯೆಯಿಂದ ಕಂಗಾಲಾಗಿದ್ದಾರೆ. ಕಣ್ಣು ಉರಿ ಹಾಗೂ ಕೆಮ್ಮಿನ ದೂರುಗಳು ಹೆಚ್ಚಾಗಿ ಕೇಳಿಬರುತ್ತಿವೆ.

ದೃಶ್ಯಗೋಚರತೆ ಕುಸಿತ
ಹೊಸಯಲ್ಲಾಪುರ ಸುತ್ತಮುತ್ತಲಿನ ರಸ್ತೆಗಳಲ್ಲಿ ಹೊಗೆ ಆವರಿಸಿಕೊಂಡಿದ್ದರಿಂದ ರಸ್ತೆ ಸರಿಯಾಗಿ ಕಾಣಿಸದೆ ವಾಹನ ಸವಾರರು ಪರದಾಡುವಂತಾಗಿದೆ. ಹೊಸಯಲ್ಲಾಪುರ ಮಾರ್ಗವಾಗಿ ಸಂಚರಿಸುವ ವಾಹನಗಳು ದಟ್ಟವಾದ ಹೊಗೆಯ ನಡುವೆ ಸಾಗಬೇಕಿದೆ. ಇದರಿಂದಾಗಿ ಅಪಘಾತಗಳ ಭೀತಿ ಎದುರಾಗಿದ್ದು, ಸಂಚಾರ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ಸಾರ್ವಜನಿಕರು ಮುಖಕ್ಕೆ ಮಾಸ್ಕ್ ಅಥವಾ ಬಟ್ಟೆ ಕಟ್ಟಿಕೊಂಡು ಸಂಚರಿಸುತ್ತಿರುವುದು ಕಂಡುಬರುತ್ತಿದೆ. ಕಸದ ಗುಡ್ಡಕ್ಕೆ ಬೆಂಕಿ ಬೀಳುತ್ತಿರುವುದು ಇದೇ ಮೊದಲಲ್ಲ. ಪದೇ ಪದೇ ಇಂತಹ ಘಟನೆಗಳು ನಡೆಯುತ್ತಿದ್ದರೂ ಪಾಲಿಕೆ ಶಾಶ್ವತ ಪರಿಹಾರ ಕಂಡುಕೊಳ್ಳುತ್ತಿಲ್ಲ. ಇಡೀ ನಗರವು ಗ್ಯಾಸ್ ಚೇಂಬರ್‌ನಂತಾಗಿದೆ ಎಂದು ಸ್ಥಳೀಯ ನಿವಾಸಿಗಳು ಆಕ್ರೋಶ ಹೊರಹಾಕಿದ್ದಾರೆ.

ಈ ಭಾಗದಲ್ಲಿ ಸಂಚರಿಸುವವರು ಕಡ್ಡಾಯವಾಗಿ ಮಾಸ್ಕ್ ಧರಿಸಿ ಮತ್ತು ಸಂಚಾರ ದಟ್ಟಣೆ ಕಡಿಮೆ ಇರುವ ಪರ್ಯಾಯ ಮಾರ್ಗಗಳನ್ನು ಬಳಸುವುದು ಸೂಕ್ತವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !