ಹೊಸದಿಗಂತ ವರದಿ ದಾವಣಗೆರೆ:
ಅತ್ತ ತುಮಕೂರು ಡಿಸಿ ಕಚೇರಿಗೆ ಬಾಂಬ್ ಬೆದರಿಕೆ ಬಂದಿರುವ ಬೆನ್ನಲ್ಲೇ ದಾವಣಗೆರೆ ಜಿಲ್ಲಾಡಳಿತ ಭವನಕ್ಕೂ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಇ-ಮೇಲ್ ಸಂದೇಶ ಬಂದಿದೆ.
ನಿಮ್ಮ ಜಿಲ್ಲಾಧಿಕಾರಿ ಕಚೇರಿಯಲ್ಲಿ 5 ಬಾಂಬ್ ಗಳನ್ನು ಶೀಘ್ರದಲ್ಲೇ ಸ್ಫೋಟಿಸಲಾಗುವುದು ಎಂಬ ಒಕ್ಕಣೆಯ ಹುಸಿ ಬೆದರಿಕೆ ಸಂದೇಶವು ದಾವಣಗೆರೆ ಜಿಲ್ಲಾಧಿಕಾರಿ ಇ-ಮೇಲ್ ಖಾತೆಗೆ ಬಂದ ಹಿನ್ನೆಲೆಯಲ್ಲಿ ಕೆಲಕಾಲ ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು. ಮುಂಜಾಗೃತಾ ಕ್ರಮವಾಗಿ ಜಿಲ್ಲಾಡಳಿತ ಭವನದ ವಿವಿಧ ಇಲಾಖೆಗಳ ಕೊಠಡಿಗಳನ್ನು ಪೊಲೀಸ್ ಇಲಾಖೆ, ಶ್ವಾನದಳ, ಬಾಂಬ್ ನಿಷ್ಕ್ರೀಯ ದಳದಿಂದ ತಪಾಸಣೆ ನಡೆಸಲಾಗಿದೆ.
ಆರ್ನಾ ಅಶ್ವಿನ್ ಶೇಖರ್ ಎಂಬ ಔಟ್‌ಲುಕ್ ಇ-ಮೇಲ್ ಖಾತೆಯಿಂದ ಬಾಂಬ್ ಬೆದರಿಕೆ ಇ-ಮೇಲ್ ಸಂದೇಶ ಬಂದಿದೆ. ಬೆದರಿಕೆ ಹಾಕಿರುವ ಮೇಲ್ ನಲ್ಲಿ ‘ಸಜ್ಜದ್ ಹೈದರ್ ಪಿಎಎಫ್ ಜಿಂದಾಬಾದ್’, ‘ಪಾಕಿಸ್ತಾನ- ತಮಿಳುನಾಡು ಡಿಎಂಕೆ- 26 ಚುನಾವಣೆ ಗಮನ ಬೇರೆಡೆ ಸೆಳೆಯಲು ಬಯಸುತ್ತೆ’, ‘ತಮಿಳುನಾಡಿನಲ್ಲಿ ಪಾಕಿಸ್ತಾನ ಐ.ಎಸ್.ಐ ಸೆಲ್ ಮಾಜಿ ಎಲ್.ಟಿ.ಟಿ.ಇ ಕಾರ್ಯಕರ್ತರೊಂದಿಗೆ ಜಂಟಿಯಾಗಿ ಈ ಕಾರ್ಯಾಚರಣೆ ನಡೆಸುತ್ತಿದೆ’ ಎಂಬಂತಹ ಅಸ್ಪಷ್ಟ ಸಾಲುಗಳು ಉಲ್ಲೇಖವಾಗಿವೆ. ಜಿಲ್ಲಾಧಿಕಾರಿಗಳು ಇ-ಮೇಲ್ ನೋಡುತ್ತಿದ್ದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸಂದೇಶ ರವಾನಿಸಿದ್ದಾರೆ. ಸಂಜೆಯೂ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪರಿಶೀಲನೆ ಮುಂದುವರೆದಿದೆ.
ಈ ಕುರಿತಂತೆ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಇ-ಮೇಲ್ ಪ್ರತಿಯನ್ನು ಕೇಂದ್ರ ತನಿಖಾ ದಳಕ್ಕೂ ಕಳಿಸಿದ್ದೇವೆ. ರಾಜ್ಯ ತನಿಖಾ ಸಂಸ್ಥೆಗಳಿಗೂ ಕಳಿಸುತ್ತೇವೆ. ಹೆಚ್ಚಿನ ತನಿಖೆಯನ್ನು ಸಂಬಂಧಪಟ್ಟವರು ಕೈಗೊಳ್ಳಲಿದ್ದಾರೆ. ಇ-ಮೇಲ್ ನಲ್ಲಿ ಅರ್ಧಂಬರ್ಧ ಇಂಗ್ಲೀಷ್ ಬಳಕೆ ಮಾಡಲಾಗಿದೆ. ಮೇಲ್ನೋಟಕ್ಕೆ ಇದೊಂದು ಹುಸಿಬಾಂಬ್ ಕರೆ ಎಂಬುದು ತಿಳಿದುಬಂದಿದೆ. ಆದ್ದರಿಂದ ನಾವು ಯಥಾರೀತಿ ಕೆಲಸ ಮುಂದುವರೆಸಿದ್ದೇವೆ ಎಂದರು.

