ಹೊಸದಿಗಂತ ಡಿಜಿಟಲ್ ಡೆಸ್ಕ್:
ಕ್ರಿಕೆಟ್ ಲೋಕದ 254 ವರ್ಷಗಳ ಸುದೀರ್ಘ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅಸಾಧಾರಣ ದಾಖಲೆಯೊಂದು ನಿರ್ಮಾಣವಾಗಿದೆ. ನ್ಯೂಜಿಲೆಂಡ್‌ನ ಪ್ರಥಮ ದರ್ಜೆ ಕ್ರಿಕೆಟ್ ಟೂರ್ನಿ ‘ಪ್ಲಂಕೆಟ್ ಶೀಲ್ಡ್’ನಲ್ಲಿ ವೇಗದ ಬೌಲರ್ ಬ್ರೆಟ್ ರಾಂಡೆಲ್ ಕೇವಲ 5 ಎಸೆತಗಳಲ್ಲಿ ಸತತ 5 ವಿಕೆಟ್ ಪಡೆಯುವ ಮೂಲಕ ವಿಶ್ವದಾಖಲೆ ಬರೆದಿದ್ದಾರೆ.
ಸೆಂಟ್ರಲ್ ಡಿಸ್ಟ್ರಿಕ್ಟ್ಸ್ ಮತ್ತು ನಾರ್ದನ್ ಡಿಸ್ಟ್ರಿಕ್ಟ್ಸ್ ತಂಡಗಳ ನಡುವಿನ ಪಂದ್ಯದಲ್ಲಿ ಸೆಂಟ್ರಲ್ ಡಿಸ್ಟ್ರಿಕ್ಟ್ಸ್ ಪರ ಬೌಲಿಂಗ್ ಮಾಡಿದ ರಾಂಡೆಲ್ ಈ ಮ್ಯಾಜಿಕ್ ಮಾಡಿದ್ದಾರೆ.
ತಮ್ಮ ಒಂದು ಓವರ್‌ನ ಕೊನೆಯ ಎಸೆತದಲ್ಲಿ ಮೊದಲ ವಿಕೆಟ್ ಪಡೆದ ರಾಂಡೆಲ್, ಆ ಬಳಿಕ ತಮ್ಮ ಮುಂದಿನ ಓವರ್‌ನ ಮೊದಲ ನಾಲ್ಕು ಎಸೆತಗಳಲ್ಲಿ ಸತತವಾಗಿ ನಾಲ್ಕು ವಿಕೆಟ್ ಉರುಳಿಸಿದರು.
ಈ ಮೂಲಕ ಪ್ರಥಮ ದರ್ಜೆ ಕ್ರಿಕೆಟ್ ಇತಿಹಾಸದಲ್ಲೇ ಐದು ಎಸೆತಗಳಲ್ಲಿ ಐದು ವಿಕೆಟ್ ಕಬಳಿಸಿದ ವಿಶ್ವದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಕೇವಲ 25 ರನ್ ನೀಡಿ ಒಟ್ಟು 7 ವಿಕೆಟ್ ಕಬಳಿಸಿದ ಬ್ರೆಟ್ ರಾಂಡೆಲ್ ಅವರ ಮಾರಕ ದಾಳಿಗೆ ನಾರ್ದನ್ ಡಿಸ್ಟ್ರಿಕ್ಟ್ಸ್ ತಂಡವು ಮೊದಲ ಇನಿಂಗ್ಸ್‌ನಲ್ಲಿ ಕೇವಲ 82 ರನ್‌ಗಳಿಗೆ ಆಲೌಟ್ ಆಯಿತು. ಈ ಹಿಂದೆ ಹಲವು ಬೌಲರ್‌ಗಳು ಹ್ಯಾಟ್ರಿಕ್ ಅಥವಾ ನಾಲ್ಕು ಎಸೆತಗಳಲ್ಲಿ ನಾಲ್ಕು ವಿಕೆಟ್ ಪಡೆದ ಉದಾಹರಣೆಗಳಿವೆಯಾದರೂ, ಸತತ ಐದು ಎಸೆತಗಳಲ್ಲಿ ವಿಕೆಟ್ ಪಡೆದ ದಾಖಲೆ ರಾಂಡೆಲ್ ಪಾಲಾಗಿದೆ.



