ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರಪ್ರದೇಶದ ಸಹರಾನ್‌ಪುರ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಇಬ್ಬರು ಮಹಿಳೆಯರು ಸೇರಿ ಒಂದೇ ಕುಟುಂಬದ ಐವರು ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಎಲ್ಲರ ದೇಹಕ್ಕೂ ಗುಂಡೇಟು ಬಿದ್ದಿದೆ. ಶವಗಳ ಪಕ್ಕದಲ್ಲಿ ಮೂರು ಪಿಸ್ತೂಲುಗಳು ಸಿಕ್ಕಿದ್ದು, ಇದು ಆತ್ಮಹತ್ಯೆಯೋ? ಅಥವಾ ಕೊಲೆಯೇ? ಎಂಬ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಮೃತರನ್ನು ಸಹರಾನ್‌ಪುರ ಪಟ್ಟಣದ ಕೌಶಿಕ್ ಬಿಹಾರ ಕಾಲೋನಿ ನಿವಾಸಿಗಳಾದ ಅಶೋಕ್ (40), ಅವರ ಪತ್ನಿ ಅಂಜಿತಾ (37), ತಾಯಿ ವಿದ್ಯಾವತಿ (70), ಇಬ್ಬರು ಪುತ್ರರಾದ ಕಾರ್ತಿಕ್ (16) ಮತ್ತು ದೇವ್ (13) ಎಂದು ಗುರುತಿಸಲಾಗಿದೆ. ತಂದೆಯ ಮರಣದ ನಂತರ ಅಶೋಕ್ ನಾಕೂರ್ ತಹಸಿಲ್‌ನ ಕಂದಾಯ ಅಧಿಕಾರಿಯಾಗಿ ಸೇರಿಕೊಂಡಿದ್ದರು. ಎರಡನೇ ಪುತ್ರ ದೇವ್ 9ನೇ ತರಗತಿ, ಹಿರಿಯ ಪುತ್ರ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದರು ಎನ್ನಲಾಗಿದೆ.
ಪ್ರಾಥಮಿಕ ತನಿಖೆಯಲ್ಲಿ ಎಲ್ಲರೂ ಗುಂಡೇಟಿನಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಕುಟುಂಬವನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆಯೇ ಅಥವಾ ಅವರೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ ಎಂದು ನಿರ್ಧರಿಸಲು ಇತರ ಕುಟುಂಬ ಸದಸ್ಯರು, ಸಂಬಂಧಿಕರು ಮತ್ತು ಹತ್ತಿರದ ನಿವಾಸಿಗಳಿಂದ ಮಾಹಿತಿ ಸಂಗ್ರಹಿಸಲಾಗುತ್ತಿದೆ. ವಿಧಿವಿಜ್ಞಾನ ತಂಡಗಳು ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿವೆ ಎಂದು ಅಧಿಕಾರಿ ಹೇಳಿದ್ದಾರೆ.
ಮೃತ ಅಶೋಕ್ ಮನೆಯಿಂದ ಅವರ ಸಹೋದರಿಯ ಕುಟುಂಬ ಕೇವಲ 200 ಮೀಟರ್ ದೂರದಲ್ಲಿ ವಾಸಿಸುತ್ತಿದೆ. ಮಂಗಳವಾರ ಬೆಳಗ್ಗೆ ಅವರು ಅಶೋಕ್‌ಗೆ ಹಲವಾರು ಬಾರಿ ಕರೆ ಮಾಡಿದರೂ, ಉತ್ತರಿಸದ ಕಾರಣ ತಮ್ಮ ಮಗನನ್ನು ಮನೆಗೆ ಕಳುಹಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಯುವಕ ಮನೆ ಬಾಗಿಲು ಬಡಿದರೂ ಪ್ರತಿಕ್ರಿಯಿಸಿದಿದ್ದಾಗ, ನೆರೆಹೊರೆಯವರ ಸಹಾಯದಿಂದ ಬಾಗಿಲು ತೆರೆಯಲಾಗಿದೆ. ಒಳಹೊಕ್ಕು ತಪಾಸಿಸಿದಾಗ, ಕೋಣೆಯಲ್ಲಿ ಶವಗಳು ಕಂಡುಬಂದಿವೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.


