Wednesday, October 22, 2025

ಸೇಡಿನ ಕಿಚ್ಚಿಗೆ ಐದು ವರ್ಷದ ಮಗು ಬಲಿ: ಮಾಲೀಕನ ಡ್ರೈವರ್‌ನಿಂದಲೇ ಭೀಕರ ಹತ್ಯೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನವದೆಹಲಿಯಲ್ಲಿ ಅಮಾನವೀಯ ಘಟನೆಯೊಂದು ವರದಿಯಾಗಿದ್ದು, ಕೇವಲ ಒಂದು ದಿನದ ಹಿಂದಿನ ಅವಮಾನಕ್ಕೆ ಸೇಡು ತೀರಿಸಿಕೊಳ್ಳಲು ಮಾಲೀಕನ ಐದು ವರ್ಷದ ಮಗನನ್ನು ಆತನ ವಾಹನದ ಚಾಲಕನೇ ಅಪಹರಿಸಿ, ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.

ಪೊಲೀಸರ ಮಾಹಿತಿ ಪ್ರಕಾರ, ಕೊಲೆಯಾದ ಮಗುವಿನ ತಂದೆ ಸಾರಿಗೆ ವಾಹನಗಳ ಮಾಲೀಕರಾಗಿದ್ದು, ನೀತು ಎಂಬ ವ್ಯಕ್ತಿ ಸೇರಿದಂತೆ ಇಬ್ಬರು ಚಾಲಕರನ್ನು ನೇಮಿಸಿಕೊಂಡಿದ್ದರು. ಘಟನೆಗೆ ಒಂದು ದಿನದ ಮೊದಲು, ನೀತು ಕಳಪೆಯಾಗಿ ವರ್ತಿಸಿದ್ದ ಕಾರಣಕ್ಕೆ ಮಾಲೀಕರು ಆತನಿಗೆ ಎರಡರಿಂದ ನಾಲ್ಕು ಬಾರಿ ಕಪಾಳಮೋಕ್ಷ ಮಾಡಿದ್ದರು ಎನ್ನಲಾಗಿದೆ. ಈ ಅವಮಾನವೇ ಭೀಕರ ಸೇಡಿಗೆ ಕಾರಣವಾಗಿದೆ.

ಏನಾಯಿತು?

ಮಂಗಳವಾರ ಮಧ್ಯಾಹ್ನ 3.30ರ ಸುಮಾರಿಗೆ ನರೇಲಾ ಕೈಗಾರಿಕಾ ಪ್ರದೇಶದಲ್ಲಿ ಮಗುವಿನ ಅಪಹರಣದ ಕುರಿತು ಪೊಲೀಸರಿಗೆ ಕರೆ ಬಂದಿದೆ. ಮನೆಯ ಹೊರಗೆ ಆಟವಾಡುತ್ತಿದ್ದ ಮಗು ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾನೆ ಎಂದು ಕುಟುಂಬಸ್ಥರು ದೂರು ನೀಡಿದ್ದರು. ಕುಟುಂಬ ಮತ್ತು ನೆರೆಹೊರೆಯವರು ಹುಡುಕಾಟ ಆರಂಭಿಸಿದಾಗ, ಕಾಣೆಯಾಗಿದ್ದ ಬಾಲಕನ ಶವವು ಹತ್ತಿರದಲ್ಲೇ ಇದ್ದ ಚಾಲಕ ನೀತುವಿನ ಬಾಡಿಗೆ ಮನೆಯಲ್ಲಿ ಪತ್ತೆಯಾಗಿದೆ.

ಭೀಕರ ಹತ್ಯೆ

ಪ್ರಾಥಮಿಕ ತನಿಖೆಯಲ್ಲಿ, ಅಪಮಾನಗೊಂಡಿದ್ದ ಆರೋಪಿ ನೀತು, ಮನೆಯ ಹೊರಗೆ ಆಡುತ್ತಿದ್ದ ಬಾಲಕನನ್ನು ಅಪಹರಿಸಿ ತನ್ನ ಬಾಡಿಗೆ ಮನೆಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ, ಆತ ಇಟ್ಟಿಗೆಯಿಂದ ಬಾಲಕನ ತಲೆಗೆ ಹೊಡೆದು ನಂತರ ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿದ್ದಾನೆ ಎಂದು ಉಪ ಪೊಲೀಸ್ ಆಯುಕ್ತ (ಉತ್ತರ) ಹರೇಶ್ವರ ಸ್ವಾಮಿ ತಿಳಿಸಿದ್ದಾರೆ.

ಘಟನೆ ಬೆಳಕಿಗೆ ಬಂದ ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು ಬಾಲಕನನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದರೂ, ಅಷ್ಟರಾಗಲೇ ಮಗು ಸಾವನ್ನಪ್ಪಿತ್ತು. ಘಟನೆಯ ನಂತರ ಆರೋಪಿ ನೀತು ಪರಾರಿಯಾಗಿದ್ದಾನೆ. ಆತನನ್ನು ಪತ್ತೆಹಚ್ಚಲು ಮತ್ತು ಬಂಧಿಸಲು ಹಲವು ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಸ್ಥಳೀಯ ಗುಪ್ತಚರ ಮಾಹಿತಿ ಬಳಸಿ ಶೋಧ ಕಾರ್ಯಾಚರಣೆ ತೀವ್ರಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

error: Content is protected !!