ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಯೋಧ್ಯೆ ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರ ಹಾಗೂ ಸೀತಾ ಮಾತೆ ವಿವಾಹದ ಶುಭದಿನವನ್ನ ಪ್ರತಿವರ್ಷ ವಿವಾಹ ಪಂಚಮಿಯೆಂದು ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ರಾಮಜನ್ಮಭೂಮಿಯಲ್ಲಿ ಖಾಕಿ ಪಡೆ ಎಲ್ಲೆಡೆ ಕಾಣಸಿಗುತ್ತದೆ.
ಅದರಂತೆ, ಈ ಬಾರಿ ಆ ದಿನ ನಾಳೆ ಅಂದರೆ ನವೆಂಬರ್ 25 ರಂದು ಆಚರಿಸಲಾಗುತ್ತಿದ್ದು, ಅದಕ್ಕಾಗಿ ಶ್ರೀರಾಮ ನಗರಿ ಸಜ್ಜಾಗುತ್ತಿದೆ. ಅದರಂತೆ, ನಾಳೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ರಾಮ ಮಂದಿರದಲ್ಲಿ ಕೇಸರಿ ಧ್ವಜ ಆರೋಹಣವನ್ನ ನೆರವೇರಿಸುತ್ತಿದ್ದು, ಜೊತೆಗೆ ರಾಮ ವಿವಾಹದ ಸಾಂಪ್ರದಾಯಿಕ ಆಚರಣೆಯ ಸಹ ಇಡೀ ದಿನ ಇರುವುದರಿಂದ ಮಂದಿರದ ಪ್ರವೇಶ ಮತ್ತು ದರ್ಶನ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ.
ಪ್ರಧಾನಿ ಭೇಟಿ ಹಾಗೂ ಧ್ವಜಾರೋಹಣ ಸಮಾರಂಭದ ಕಾರಣದಿಂದ ನವೆಂಬರ್ 25ರ ಬೆಳಗ್ಗೆಯಿಂದ ಮಧ್ಯಾಹ್ನ 2:30ರವರೆಗೆ ಸಾಮಾನ್ಯ ಭಕ್ತರಿಗೆ ರಾಮ ಮಂದಿರ ಪ್ರವೇಶವನ್ನು ಪೂರ್ತಿಯಾಗಿ ನಿರ್ಬಂಧಿಸಲಾಗಿದೆ. ಈ ಸಮಯದಲ್ಲಿ ಕೇವಲ ಆಹ್ವಾನಿತ ಅತಿಥಿಗಳು ಮತ್ತು ಕ್ಯೂಆರ್ ಕೋಡ್ ಪಾಸ್ ಹೊಂದಿರುವವರಿಗೆ ಮಾತ್ರವೇ ಪ್ರವೇಶ ಅನುಮತಿ ಇರುತ್ತದೆ. ಭದ್ರತಾ ಸಿಬ್ಬಂದಿ, ಅಧಿಕೃತ ತಂಡಗಳು ಹಾಗೂ ವಿಶೇಷ ಅತಿಥಿಗಳ ಸಂಚಾರ ವ್ಯವಸ್ಥೆಗಾಗಿ ಈ ಕ್ರಮ ಕೈಗೊಳ್ಳಲಾಗಿದೆ.

