ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಳ್ತಂಗಡಿ ತಾಲೂಕಿನ ಕೊನೆ ಭಾಗವಾಗಿರುವ ಕೊಕ್ಕಡ ಹೊಬಳಿ ವ್ಯಾಪ್ತಿಯ ಶಿಶಿಲದಲ್ಲಿ ಮಂಗಳವಾರ ಮಧ್ಯಾಹ್ನದಿಂದ ಕಪಿಲಾ ನದಿಯಲ್ಲಿ ನೀರು ಪ್ರವಾಹೋಪಾದಿಯಲ್ಲಿ ಬಂದಿರುವುದು ಜನರಲ್ಲಿ ಆತಂಕ ಮೂಡಿಸಿದೆ.
ಕೆಲ ವಾರಗಳ ಹಿಂದೆಯೂ ಭಾರೀ ಪ್ರವಾಹ ಬಂದು ಶ್ರೀ ಶಿಶಿಲೇಶ್ವರ ದೇವಸ್ಥಾನ ನೀರಿನಿಂದ ಆವೃತ್ತವಾಗಿತ್ತು. ಇದೀಗ ಮತ್ತೆ ಅದೇ ಪರಿಸ್ಥಿತಿ ಉಂಟಾಗಿದೆ. ದೇವಸ್ಥಾನದ ಹೊರಾಂಗಣ, ಒಳಾಂಗಣಕ್ಕೆ ನೀರು ನುಗ್ಗಿದೆ.
ಇಂದು ಮಧ್ಯಾಹ್ನದಿಂದ ಶಿಶಿಲ-ಅರಸಿನಮಕ್ಕಿ ಭಾಗದಲ್ಲಿ ಹೆದರಿಕೆಯುಂಟು ಮಾಡುವಷ್ಟು ಧೋ ಎಂದು ಮಳೆ ಸುರಿಯತೊಡಗಿತ್ತು.
ಅದೇ ರೀತಿ ಇನ್ನೊಂದೆಡೆ ವೇಣೂರು ಹೋಬಳಿ ವ್ಯಾಪ್ತಿಯ ನಾರಾವಿ ಸನಿಹದ ಕುತ್ಲೂರು ಎಂಬಲ್ಲಿನ ಹೊಳೆಯೊಂದರಲ್ಲಿ ಏಕಾಏಕಿ ನೀರು ಬಂದಿರುವುದು ಗ್ರಾಮಸ್ಥರ ನಿದ್ದೆಗೆಡಿಸಿದೆ.
ಕ್ಷಣ ಮಾತ್ರದೊಂದಿಗೆ ಬಂದ ನೀರಿನೊಂದಿಗೆ ಮರಮಟ್ಟುಗಳೂ ಕೂಡ ತೇಲಿ ಬಂದಿದೆ. ನದಿ ದಡದಲ್ಲಿನ ಕೃಷಿ ಭೂಮಿಗೂ ನೀರು ವಿಸ್ತರಿಸಿದ್ದು ರೈತರಿಗೆ ಚಿಂತೆ ಹೆಚ್ಚಿಸಿದೆ. ಪಶ್ಚಿಮಘಟ್ಟದಲ್ಲಿ ಭೂ ಕುಸಿತ ಸಂಭವಿಸಿರಬಹುದು. ಹೀಗಾಗಿ ನೀರು ಬಂದಿರಬೇಕು ಎಂದು ಅನುಮಾನ ವ್ಯಕ್ತವಾಗುತ್ತಿದೆ.