January20, 2026
Tuesday, January 20, 2026
spot_img

ದಿಲ್ಲಿಯಲ್ಲಿ ಮಂಜಿನ ಮಾಯಾಜಾಲ: 100ಕ್ಕೂ ಹೆಚ್ಚು ರೈಲುಗಳು ವಿಳಂಬ, ವಿಮಾನ ಹಾರಾಟ ರದ್ದು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉತ್ತರ ಭಾರತದಲ್ಲಿ ಶೀತಗಾಳಿಯ ಅಬ್ಬರ ಜೋರಾಗಿದ್ದು, ದಟ್ಟವಾದ ಮಂಜು ಇಡೀ ಜನಜೀವನವನ್ನು ಹಿಂಡಿ ಹಿಪ್ಪೆ ಮಾಡಿದೆ. ಮಂಜಿನಿಂದಾಗಿ ದೃಷ್ಟಿ ಕ್ಷಮತೆ ಶೂನ್ಯಕ್ಕೆ ತಲುಪಿದ್ದು, ಸಾರಿಗೆ ವ್ಯವಸ್ಥೆ ಸಂಪೂರ್ಣವಾಗಿ ಏರುಪೇರಾಗಿದೆ.

ದೇಶಾದ್ಯಂತ ಸುಮಾರು 600 ವಿಮಾನಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದ್ದು, ಪ್ರಯಾಣಿಕರು ವಿಮಾನ ನಿಲ್ದಾಣಗಳಲ್ಲಿ ಗಂಟೆಗಟ್ಟಲೆ ಕಾಯುವಂತಾಗಿದೆ.

ಒಟ್ಟು 128 ವಿಮಾನಗಳು ರದ್ದಾಗಿದ್ದು, ಸುಮಾರು 470 ವಿಮಾನಗಳು ವಿಳಂಬವಾಗಿವೆ.

ಮುಂಬೈ, ಬೆಂಗಳೂರು, ಹೈದರಾಬಾದ್, ಅಮೃತಸರ ಮತ್ತು ಜೈಪುರ ಸೇರಿದಂತೆ ಪ್ರಮುಖ ನಗರಗಳ ವಿಮಾನ ಸೇವೆಗಳ ಮೇಲೂ ಮಂಜಿನ ಪ್ರಭಾವ ಬೀರಿದೆ.

ರೈಲ್ವೆ ಇಲಾಖೆಯೂ ಮಂಜಿನ ಹೊಡೆತಕ್ಕೆ ಸಿಲುಕಿದ್ದು, ಸುಮಾರು 100ಕ್ಕೂ ಹೆಚ್ಚು ರೈಲುಗಳು ತಡವಾಗಿ ಸಂಚರಿಸುತ್ತಿವೆ. ಇದರಲ್ಲಿ ಪ್ರತಿಷ್ಠಿತ ವಂದೇ ಭಾರತ್, ಶತಾಬ್ದಿ ಮತ್ತು ರಾಜಧಾನಿ ಎಕ್ಸ್‌ಪ್ರೆಸ್‌ಗಳೂ ಸೇರಿವೆ. ದೆಹಲಿ, ಲಕ್ನೋ ಮತ್ತು ವಾರಣಾಸಿ ವಿಭಾಗಗಳಲ್ಲಿ ರೈಲು ಸಂಚಾರವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ.

ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ಡಿಸೆಂಬರ್ 10 ರಿಂದ ಫೆಬ್ರವರಿ 10 ರವರೆಗೆ ಅಧಿಕೃತ ‘ಮಂಜಿನ ಋತು’ ಎಂದು ಘೋಷಿಸಿದೆ. ಈ ಅವಧಿಯಲ್ಲಿ ವಿಮಾನಗಳ ವಿಳಂಬ ಅಥವಾ ರದ್ದತಿ ಸಾಮಾನ್ಯವಾಗಿದ್ದು, ಪ್ರಯಾಣಿಕರು ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಗಿದೆ.

ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ಮುಂಬರುವ ದಿನಗಳಲ್ಲಿ ದೆಹಲಿ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ತಾಪಮಾನ ಇನ್ನೂ ಕುಸಿಯಲಿದೆ. ಮಂಜಿನ ಜೊತೆಗೆ ಹಗುರವಾದ ಮಳೆಯಾಗುವ ಸಾಧ್ಯತೆಯೂ ಇರುವುದರಿಂದ ಚಳಿಯ ತೀವ್ರತೆ ಮತ್ತಷ್ಟು ಹೆಚ್ಚಾಗಲಿದೆ.

Must Read