ತಂಪಾದ ಸಂಜೆಗಳಲ್ಲಿ ಬಿಸಿಬಿಸಿ, ಖಾರ ಖಾರದ ತಿಂಡಿ ತಿನ್ನಬೇಕೆಂಬ ಆಸೆ ಎಲ್ಲರಿಗೂ ಬರುತ್ತದೆ. ಪ್ರತೀ ಸಲ ಬಜ್ಜಿ, ಬೋಂಡಾ ಅಥವಾ ಪಕೋಡಾ ತಿನ್ನುವುದಕ್ಕಿಂತ ಬೇರೆದೇನಾದರೂ ಟ್ರೈ ಮಾಡಬೇಕೆನಿಸಿದರೆ, “ಇಡ್ಲಿ ಮಂಚೂರಿಯನ್” ಅತ್ಯುತ್ತಮ ಆಯ್ಕೆ.
ಬೇಕಾಗುವ ಸಾಮಗ್ರಿಗಳು:
ಇಡ್ಲಿ – 5
ಮೈದಾ – ½ ಕಪ್
ಕಾರ್ನ್ ಫ್ಲೋರ್ – ½ ಕಪ್
ರುಚಿಗೆ ತಕ್ಕಷ್ಟು ಉಪ್ಪು
ಕೆಂಪು ಮೆಣಸಿನ ಪುಡಿ – 2 ಟೀಸ್ಪೂನ್
ಕರಿಮೆಣಸಿನ ಹುಡಿ – 1 ಟೀಸ್ಪೂನ್
ಸೋಯಾ ಸಾಸ್ – 1 ಚಮಚ
ಅಡುಗೆ ಎಣ್ಣೆ – ಅರ್ಧ ಕಪ್
ಈರುಳ್ಳಿ – 1 (ಚೂರು ಮಾಡಿದ್ದು)
ಶುಂಠಿ – ಸ್ವಲ್ಪ (ಚಿಕ್ಕದಾಗಿ ಕತ್ತರಿಸಿದ್ದು)
ಬೆಳ್ಳುಳ್ಳಿ – 1 (ಚಿಕ್ಕದಾಗಿ ಕತ್ತರಿಸಿದ್ದು)
ಕ್ಯಾಪ್ಸಿಕಂ – 1
ಟೊಮೆಟೊ ಸಾಸ್ – 1 ಚಮಚ
ಚಿಲ್ಲಿ ಸಾಸ್ – 2 ಚಮಚ
ವಿನೆಗರ್ – 2 ಚಮಚ
ಲವಂಗ – 2
ಮಾಡುವ ವಿಧಾನ:
ಮೊದಲಿಗೆ ಇಡ್ಲಿಗಳನ್ನು ನಾಲ್ಕು ತುಂಡುಗಳಾಗಿ ಕತ್ತರಿಸಿ ಪಕ್ಕಕ್ಕೆ ಇಡಿ.
ಒಂದು ಬಟ್ಟಲಿನಲ್ಲಿ ಮೈದಾ, ಕಾರ್ನ್ ಫ್ಲೋರ್, ಉಪ್ಪು, ಕೆಂಪು ಮೆಣಸಿನ ಪುಡಿ, ಕರಿಮೆಣಸಿನ ಹುಡಿ ಮತ್ತು ಸೋಯಾ ಸಾಸ್ ಸೇರಿಸಿ ಮಿಶ್ರಣ ಮಾಡಿ. ಸ್ವಲ್ಪ ನೀರು ಸೇರಿಸಿ ಹಿಟ್ಟನ್ನು ತಯಾರಿಸಿ. ಈಗ ಇಡ್ಲಿ ತುಂಡುಗಳನ್ನು ಈ ಹಿಟ್ಟಿನಲ್ಲಿ ಮುಳುಗಿಸಿ ಬಿಸಿ ಎಣ್ಣೆಯಲ್ಲಿ ಚಿನ್ನದ ಬಣ್ಣ ಬರುವವರೆಗೆ ಹುರಿಯಿರಿ.
ಬೇರೆ ಪಾತ್ರೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಈರುಳ್ಳಿ, ಶುಂಠಿ, ಬೆಳ್ಳುಳ್ಳಿ, ಕ್ಯಾಪ್ಸಿಕಂ ಹಾಕಿ ಹುರಿದು, ನಂತರ ಟೊಮೆಟೊ ಸಾಸ್, ಚಿಲ್ಲಿ ಸಾಸ್, ಸೋಯಾ ಸಾಸ್, ವಿನೆಗರ್ ಮತ್ತು ಸ್ವಲ್ಪ ಉಪ್ಪು ಸೇರಿಸಿ ಚೆನ್ನಾಗಿ ಫ್ರೈ ಮಾಡಿ. ಕೊನೆಗೆ ಹುರಿದ ಇಡ್ಲಿ ತುಂಡುಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಬಿಸಿ ಬಿಸಿ ಸರ್ವ್ ಮಾಡಿ.

