ದಕ್ಷಿಣ ಭಾರತದ ಖಾದ್ಯಗಳಲ್ಲಿ ಉತ್ತಪ್ಪ ಒಂದು ವಿಶೇಷ ಸ್ಥಾನ ಪಡೆದಿದೆ. ಮಂಗಳೂರು ಭಾಗಗಳಲ್ಲಿ ಮುಂಜಾನೆ ಉಪಹಾರದಲ್ಲಿ ಈರುಳ್ಳಿ ಉತ್ತಪ್ಪ ಹೆಚ್ಚು ಪ್ರಸಿದ್ಧವಾಗಿದೆ. ದೋಸೆ ಅಥವಾ ಇಡ್ಲಿ ಹಿಟ್ಟಿನಿಂದ ಸಾದಾರಣವಾಗಿ ತಯಾರಾಗುವ ಈ ತಿಂಡಿ, ಸುವಾಸನೆಯ ಈರುಳ್ಳಿಯಿಂದ ಇನ್ನಷ್ಟು ರುಚಿಕರವಾಗುತ್ತದೆ.
ಬೇಕಾಗುವ ಸಾಮಗ್ರಿಗಳು:
ದೋಸೆ ಅಕ್ಕಿ – 2 ಕಪ್
ಉದ್ದಿನ ಬೇಳೆ – ಅರ್ಧ ಕಪ್
ಮೆಂತ್ಯೆ – 1 ಚಮಚ
ಅವಲಕ್ಕಿ – 2 ಮುಷ್ಟಿ
ಉಪ್ಪು – 2 ಚಮಚ
ಸಣ್ಣದಾಗಿ ಹೆಚ್ಚಿದ ಈರುಳ್ಳಿ – 2
ಹಸಿಮೆಣಸಿನಕಾಯಿ – 2 ರಿಂದ 3
ಕರಿಬೇವಿನ ಎಲೆಗಳು – ಸ್ವಲ್ಪ
ಮಾಡುವ ವಿಧಾನ:
ಮೊದಲಿಗೆ ದೋಸೆ ಅಕ್ಕಿಯನ್ನು ತೊಳೆದು, ಅದಕ್ಕೆ ಮೆಂತ್ಯ ಬೀಜಗಳನ್ನು ಸೇರಿಸಿ 3 ರಿಂದ 4 ಗಂಟೆಗಳ ಕಾಲ ನೆನೆಸಿಡಬೇಕು. ರುಬ್ಬುವುದಕ್ಕೆ 15 ನಿಮಿಷಗಳ ಮುಂಚೆ ಅವಲಕ್ಕಿ ನೆನೆಸಿಕೊಂಡು, ಎಲ್ಲಾ ಪದಾರ್ಥಗಳನ್ನು ಸೇರಿಸಿ ನುಣ್ಣಗೆ ರುಬ್ಬಿ, ಹಿಟ್ಟನ್ನು ರಾತ್ರಿಯಿಡೀ ಹುದುಗಲು ಬಿಡಬೇಕು.
ಬೆಳಿಗ್ಗೆ ಹಿಟ್ಟಿಗೆ ಉಪ್ಪು ಸೇರಿಸಿ ಮಿಶ್ರಣ ಮಾಡಿದ ಬಳಿಕ ಬಿಸಿ ತವೆಯಲ್ಲಿ ಎಣ್ಣೆ ಸವರಿ, ಹಿಟ್ಟನ್ನು ಸುರಿದು ದಪ್ಪದ ದೋಸೆಯಂತೆ ಹರಡದೆ ಬಿಡಬೇಕು. ಮೇಲ್ಭಾಗದಲ್ಲಿ ಈರುಳ್ಳಿ, ಕೊತ್ತಂಬರಿ, ಹಸಿಮೆಣಸು ಹಾಗೂ ಕರಿಬೇವಿನ ಎಲೆಗಳನ್ನು ಸಮವಾಗಿ ಹರಡಿ ಬೇಯಿಸಬೇಕು. ಒಂದು ಬದಿ ಬೆಂದ ಬಳಿಕ ತಿರುಗಿಸಿ ಮತ್ತೊಂದು ಬದಿಯನ್ನೂ ಬೇಯಿಸಬೇಕು.

                                    