ದಿನಾಲೂ ಒಂದೇ ತರಹದ ಅಡುಗೆಯನ್ನು ಮಾಡಿ ತಿನ್ನೋದು ಯಾರಿಗೆ ಇಷ್ಟವಾಗುತ್ತೆ ಹೇಳಿ. ಇಂತಹ ಸಮಯದಲ್ಲಿ ಕ್ವಿಕ್ ಆಗಿ ಹಾಗೂ ಟೇಸ್ಟಿಯಾಗಿ ತಿನ್ನಲು ಏನಾದರೂ ಬೇಕೆನ್ನಿಸಿದರೆ, ಪನೀರ್ ಬಟರ್ ಮಸಾಲಾ ಒಂದು ಉತ್ತಮ ಆಯ್ಕೆ. ಪನೀರ್ ಪ್ರಿಯರಿಗೆ ಇದು ಬಾಯಲ್ಲಿ ನೀರೂರಿಸುವಂತಹ ಖಾದ್ಯವಾಗಿದ್ದು, ಹೋಟೆಲ್ ಸ್ಟೈಲ್ ರುಚಿಯನ್ನು ಮನೆಯಲ್ಲೇ ಸುಲಭವಾಗಿ ಸವಿಯಬಹುದು.
ಬೇಕಾಗುವ ಸಾಮಾಗ್ರಿಗಳು
ಪನೀರ್ – 250 ಗ್ರಾಂ
ಬೆಣ್ಣೆ – 50 ಗ್ರಾಂ
ಈರುಳ್ಳಿ – 1
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಚಮಚ
ಟೊಮ್ಯಾಟೊ – 3
ಗೋಡಂಬಿ – 15 ರಿಂದ 20
ಕೆಂಪು ಮೆಣಸಿನ ಪುಡಿ – 1 ಟೀ ಸ್ಪೂನ್
ಗರಂ ಮಸಾಲ – 1 ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಕ್ರೀಮ್ – 100 ಮಿಲಿ
ಕೊತ್ತಂಬರಿ ಸೊಪ್ಪು – ಸ್ವಲ್ಪ
ಮಾಡುವ ವಿಧಾನ
ಮೊದಲಿಗೆ ಪನೀರ್ ತುಂಡುಗಳನ್ನು ಚಿಕ್ಕ ಚೌಕಾಕಾರದ ರೂಪದಲ್ಲಿ ಕತ್ತರಿಸಿ, ಸ್ವಲ್ಪ ಬೆಣ್ಣೆಯಲ್ಲಿ ಗೋಲ್ಡನ್ ಬಣ್ಣ ಬರುವವರೆಗೆ ಫ್ರೈ ಮಾಡಿಕೊಳ್ಳಬೇಕು. ನಂತರ ಬಾಣಲೆಗೆ ಬೆಣ್ಣೆ ಹಾಕಿ, ಈರುಳ್ಳಿಯನ್ನು ಬ್ರೌನ್ ಬಣ್ಣ ಬರುವವರೆಗೆ ಹುರಿಯಬೇಕು. ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ 2 ನಿಮಿಷ ಹುರಿದ ಬಳಿಕ, ಟೊಮ್ಯಾಟೊ ಮತ್ತು ಗೋಡಂಬಿಯ ಜೊತೆಗೆ ಹುರಿದ ಈರುಳ್ಳಿಯನ್ನು ಮಿಕ್ಸರ್‌ನಲ್ಲಿ ಪೇಸ್ಟ್ ಮಾಡಿಕೊಳ್ಳಬೇಕು.
ಈ ಪೇಸ್ಟ್ ಅನ್ನು ಮತ್ತೆ ಪ್ಯಾನ್‌ನಲ್ಲಿ ಹಾಕಿ ದಪ್ಪವಾಗುವವರೆಗೆ ಬೇಯಿಸಿ, ಅದಕ್ಕೆ ಕೆಂಪು ಮೆಣಸಿನ ಪುಡಿ, ಗರಂ ಮಸಾಲ ಹಾಗೂ ಉಪ್ಪು ಸೇರಿಸಬೇಕು. ಈಗ ಫ್ರೈ ಮಾಡಿದ ಪನೀರ್ ತುಂಡುಗಳನ್ನು ಸೇರಿಸಿ 5 ನಿಮಿಷ ಬೇಯಿಸಿ. ನಂತರ ಕ್ರೀಮ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಇನ್ನೂ 2 ನಿಮಿಷ ಬೇಯಿಸಿದರೆ, ಬಿಸಿ ಬಿಸಿ ಪನೀರ್ ಬಟರ್ ಮಸಾಲಾ ಸವಿಯಲು ಸಿದ್ಧ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಗೂ ಸ್ವಲ್ಪ ಕ್ರೀಮ್‌ನಿಂದ ಅಲಂಕರಿಸಿದರೆ ರೆಸ್ಟೋರೆಂಟ್ ಸ್ಟೈಲ್ ಪನೀರ್ ಬಟರ್ ಮಸಾಲಾ ರೆಡಿ.