ದಿನನಿತ್ಯದ ಊಟದಲ್ಲಿ ಆರೋಗ್ಯವೂ ಇರಬೇಕು, ರುಚಿಯೂ ಇರಬೇಕು ಅನ್ನೋದು ಎಲ್ಲರ ಆಸೆ. ಅಂಥದ್ದೇ ಒಂದು ಸರಳ ಆದರೆ ಪೌಷ್ಟಿಕತೆಯಿಂದ ತುಂಬಿದ ಉತ್ತರ ಭಾರತೀಯ ಶೈಲಿಯ ಖಾದ್ಯವೇ ಪಾಲಕ್ ಚನಾ ಮಸಾಲಾ. ಹಸಿರು ಪಾಲಕ್‌ನ ಪೌಷ್ಟಿಕ ಗುಣಗಳು ಹಾಗೂ ಚನಾದ ಪ್ರೋಟೀನ್ ಶಕ್ತಿ ಒಂದೇ ಪಾತ್ರೆಯಲ್ಲಿ ಬೆರೆತು, ಮನೆಮಂದಿಗೆ ಇಷ್ಟವಾಗುವ ರುಚಿಕರ ಕರಿ ತಯಾರಾಗುತ್ತೆ.
ಬೇಕಾಗುವ ಸಾಮಗ್ರಿಗಳು:
ಬೇಯಿಸಿದ ಕಡಲೆಕಾಳು – 1 ಕಪ್
ಪಾಲಕ್ ಸೊಪ್ಪು – 2 ಕಪ್
ಈರುಳ್ಳಿ – 1
ಟೊಮೇಟೊ – 1
ಹಸಿಮೆಣಸಿನಕಾಯಿ – 1
ಬೆಳ್ಳುಳ್ಳಿ – 4–5 ಕಾಯಿ
ಶುಂಠಿ – ಸ್ವಲ್ಪ
ಎಣ್ಣೆ – 2 ಟೇಬಲ್ ಸ್ಪೂನ್
ಜೀರಿಗೆ – 1 ಟೀ ಸ್ಪೂನ್
ಗರಂ ಮಸಾಲಾ – ½ ಟೀ ಸ್ಪೂನ್
ಧನಿಯಾ ಪುಡಿ – 1 ಟೀ ಸ್ಪೂನ್
ಕೆಂಪು ಮೆಣಸಿನ ಪುಡಿ – ರುಚಿಗೆ ತಕ್ಕಷ್ಟು
ಉಪ್ಪು – ಅಗತ್ಯಕ್ಕೆ ತಕ್ಕಷ್ಟು
ಮಾಡುವ ವಿಧಾನ:
ಮೊದಲು ಪಾಲಕ್ ಸೊಪ್ಪನ್ನು ಚೆನ್ನಾಗಿ ತೊಳೆದು ಸ್ವಲ್ಪ ಬೇಯಿಸಿ ಪ್ಯೂರಿ ಮಾಡಿಕೊಳ್ಳಿ. ಒಂದು ಪಾತ್ರೆಯಲ್ಲಿ ಎಣ್ಣೆ ಬಿಸಿ ಮಾಡಿ ಜೀರಿಗೆ ಹಾಕಿ. ನಂತರ ಈರುಳ್ಳಿ, ಬೆಳ್ಳುಳ್ಳಿ ಮತ್ತು ಶುಂಠಿ ಹಾಕಿ ಗೋಲ್ಡನ್ ಬಣ್ಣ ಬರುವವರೆಗೆ ಹುರಿಯಿರಿ. ಟೊಮೇಟೊ ಪ್ಯೂರಿ ಸೇರಿಸಿ ಮಸಾಲೆಯ ವಾಸನೆ ಬರುವವರೆಗೆ ಬೇಯಿಸಿ.
ಈಗ ಧನಿಯಾ ಪುಡಿ, ಮೆಣಸಿನ ಪುಡಿ, ಉಪ್ಪು ಸೇರಿಸಿ ಕಲಸಿ. ಬೇಯಿಸಿದ ಕಡಲೆಕಾಳು ಹಾಕಿ ಸ್ವಲ್ಪ ನೀರು ಸೇರಿಸಿ ಕುದಿಯಲು ಬಿಡಿ. ಕೊನೆಯಲ್ಲಿ ಪಾಲಕ್ ಪ್ಯೂರಿ ಮತ್ತು ಗರಂ ಮಸಾಲಾ ಸೇರಿಸಿ 5 ನಿಮಿಷ ಕುದಿಸಿದರೆ ರುಚಿಯಾದ ಪಾಲಕ್ ಚನಾ ಮಸಾಲಾ ಸಿದ್ಧ.

